ಬಂಟ್ವಾಳ: ಗ್ರಾಮೀಣ ಜನರ ಭಾವನೆಯೊಂದಿಗೆ ಬೆರೆಯುತ್ತಾ ಸರಕಾರಿ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಸವಾಲಿನ ಕೆಲಸ, ಅಂತಹ ಸವಾಲಿನ ನಡುವೆ ಕಾನೂನಿಗೆ ಚ್ಯುತಿ ಬಾರದ ರೀತಿಯಲ್ಲಿ ಅಭಿವೃದ್ದಿ ಅಧಿಕಾರಿಗಳು ಕೆಲಸ ಮಾಡಿ ನಿವೃತ್ತಿ ಹೊಂದುವುದಕ್ಕೆ ಪುಣ್ಯ ಮಾಡಿರಬೇಕು ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು. ಅವರು ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ಅಭಿವೃದ್ದಿ ಅಧಿಕಾರಿಗಳ ಒಕ್ಕೂಟ ಮತ್ತು ತಾ.ಪಂ.ನ ವತಿಯಿಂದ ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಂ.ಅಭಿವೃದ್ದಿ ಅಧಿಕಾರಿ ಧರ್ಮಪಾಲ ಅವರಿಗೆ ಬೀಳ್ಕೊಡುಗೆ ಮತ್ತು ಉದ್ಯೋಗ ಖಾತರಿ ಯೋಜನೆಯ ಮೂಲಕ “ಮುಕ್ತಿ ಧಾಮ ” ಎನ್ನುವ ಸ್ಮಶಾನ ನಿರ್ಮಾಣಕ್ಕೆ ಸರ್ವೋತ್ತಮ ಪ್ರಶಸ್ತಿ ಪುರಸ್ರ್ಖತರಾದ ಪಂ.ಅಭಿವೃದ್ದಿ ಅಧಿಕಾರಿ ಗೋಕುಲ್ ದಾಸ ಭಕ್ತ ಅವರಿಗೆ ಅಭಿನಂದನಾ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಂ. ಅಭಿವೃದ್ದಿ ಅಧಿಕಾರಿಗಳು ಯಾವುದೇ ಒತ್ತಡವಿದ್ದರೂ ವ್ಯವಸ್ಥಿತವಾಗಿ , ಧರ್ಮ ನಿಷ್ಟೆಯಿಂದ ಕೆಲಸ ಮಾಡಿ, ಟೀಕೆಗಳಿಗೆ ಕಿವಿ ಕೊಡಬೇಡಿ ಎಂದು ಹೇಳಿದರು. ವೇದಿಕೆಯಲ್ಲಿ ತಾ.ಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಂಯಾನ್ ಮಿರಾಂದ, ಉದ್ಯೋಗ ಖಾತರಿ ಯೋಜನೆಯ ವ್ಯವಸ್ಥಾಪಕ ಸಹಾಯಕ ನಿರ್ದೇಶಕಿ ದಯಾವತಿ ಮತ್ತು ತಾ.ಪಂ.ಎ.ಒ ಶಾರದ ಶೆಟ್ಟ ಉಪಸ್ಥಿತರಿದ್ದರು. ತಾ.ಪಂ.ನ ಕಚೇರಿ ವ್ಯವಸ್ಥಾಪಕ ಸುಂದರ ಸ್ವಾಗತಿಸಿ, ಶಿವಾನಂದ ಪೂಜಾರಿ ವಂದಿಸಿದರು. ವಿಜಯ ಶಂಕರ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
