ಬಂಟ್ವಾಳ; ಮನಸ್ಸುಗಳ ಮಧ್ಯೆ ವಿಷಬೀಜ ಬಿತ್ತುವ ಕೆಲ ಸಂಘಟನೆಗಳಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದ್ದು, ಈ ಕುರಿತು ಪ್ರತಿಯೊಬ್ಬರೂ ಸ್ವಯಂಜಾಗೃತರಾಗುವುದು ಇಂದಿನ ತುರ್ತು ಅಗತ್ಯ ಎಂದು ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು. ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ -ಸಿಓಡಿಪಿ(ರಿ.) ಮಂಗಳೂರು ಹಾಗೂ ನಮನ ಮಹಿಳಾ ಒಕ್ಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಮೊಡಂಕಾಪು ಚರ್ಚ್ ಮೈದಾನದಲ್ಲಿ ಸೋಮವಾರ ನಡೆದ ಬೃಹತ್ ಶಾಂತಿ ಸೌಹಾರ್ದ ಸಮಾವೇಶವನ್ನು ಪಾರಿವಾಳ ವನ್ನು ಹಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಕೋಮುಭಾವನೆ ಕೆರಳಿಸುವ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿದ್ದು, ಶಾಂತಿ ಸೌಹಾರ್ದ ಸಮಾವೇಶ ಈ ಎಲ್ಲಾ ಗೊಂದಲಗಳಿಗೆ ತೆರೆಎಳೆಯುವಂತಾಗಲಿ ಎಂದವರು ಆಶಯವ್ಯಕ್ತಪಡಿಸಿದರು.
ಮೊಡಂಕಾಪು ಚರ್ಚ್‍ನ ಧರ್ಮಗುರು ವಂದನೀಯ ಸ್ವಾಮಿ ಮ್ಯಾಕ್ಸಿಂ ನೊರೊನ್ಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬನಿಗೂ ಅಂತರಾಳದ ನೆಮ್ಮದಿ ಇದಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ ಎಂದರು.
ಸುರತ್ಕಲ್ ಚೊಕ್ಕಬೆಟ್ಟು ಮಸೀದಿ ಧರ್ಮಗುರು ಮೌಲಾನ ಯು.ಕೆ. ಅಬ್ದುಲ್ ಅಝೀಝ್ ಮಾತನಾಡಿ, ಅಂಗೈಯಲ್ಲಿ ಜಗತ್ತು ನೋಡುವಷ್ಟರ ಮಟ್ಟಿಗೆ ನಮ್ಮ ವಿಜ್ಞಾನ ಮುಂದಿವರಿದಿದ್ದೇವೆ, ಆದರೆ ನಮ್ಮೊಳಗಿನ ನೈಜ ಧಾರ್ಮಿಕತೆ, ನೈತಿಕತೆ ನಾಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಸಾಮಾಜಿಕ ಸೇವಾಕಾರ್ಯಕರ್ತೆ ವಿದ್ಯಾದಿನಕರ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿದರು. ಸಹಜೀವನ ಒಕ್ಕೂಟದ ಅಧ್ಯಕ್ಷ ವಿಲಿಯಂ, ಮಂಗಳೂರು ಸಿಓಡಿಪಿ ನಿರ್ದೇಶಕ ಸ್ವಾಮಿ ಓಸ್ವಲ್ಡ್ ಮೊಂತೆರೋ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಮನ ಮಹಿಳಾ ಒಕ್ಕೂಟ ದ ಅಧ್ಯಕ್ಷೆ ಭಾರತಿ ಚೌಟ ವಂದಿಸಿದರು. ಸಿಓಡಿಪಿ ಸಂಸ್ಥೆಯ ರೀಟಾ ಹಾಗೂ ವಾಣಿ ಕಾರ್ಯಕ್ರಮ ನಿರ್ವಹಿಸಿದರು

ಸೌಹಾರ್ದ ಜಾಥಾ..
ಸಭಾಕಾರ್ಯಕ್ರಮಕ್ಕೆ ಮುನ್ನ ನಡೆದ ಶಾಂತಿ-ಸೌಹಾರ್ದ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಶಾಂತಿ ಸೌಹಾರ್ದ ಕಾಪಾಡುವುದು ಹಿಂದಿಗಿಂತ ಈಗ ಹೆಚ್ಚು ಅವಶ್ಯವಾಗಿದೆ. ಏಸು ಸ್ವಾಮಿ ಕಲಿಸಿದ ದಾರಿಯಲ್ಲಿ ನಾವೆಲ್ಲ ಶಾಂತಿಗಾಗಿ ಒಂದಾಗಬೇಕಿದೆ ಎಂದರುಈ ಸಂದರ್ಭ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬಂಟ್ವಾಳ ಬೂಡಾ ದ ನಿಕಟಪೂರ್ವ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಮೊದಲಾದವರು ಸಾಥ್ ನೀಡಿದರು.ಬಳಿಕ ವಿವಿಧ ಒಕ್ಕೂಟಗಳು, ಸ್ವಸಹಾಯ ಸಂಘದ ಸದಸ್ಯರಿಂದ ಬೃಹತ್ ಸೌಹಾರ್ದ ಜಾಥಾವು ಕೈಕಂಬದ ಬಳಿಯಿಂದ ಮೊಡಂಕಾಪು ಚರ್ಚ್ ಮೈದಾನಕ್ಕೆ ಸಾಗಿ ಬಂತು.
ಮಂಗಳೂರು ಆಗ್ನೇಸ್ ಕಾಲೇಜು ವಿದ್ಯಾರ್ಥಿನಿಯರ “ಶಾಂತಿ ಎಲ್ಲಿದೆ” ನಾಟಕವೂ ವಿಶೇಷ ಗಮನಸೆಳೆಯಿತು.

