ಬಂಟ್ವಾಳ: ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತು ಯೋಜನೆಯಡಿ ಸುಮಾರು ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಕಾಮಾಗಾರಿಯನ್ನು ಮಂಗಳೂರು ರಾಮಕೃಷ್ಣ ಆಶ್ರಮದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಸರಕಾರಿ ಶಾಲೆ ನಿರ್ಮಾಣಗೊಳ್ಳುತ್ತಿರುವ ಬಗ್ಗೆ ಗುರುವಾರ ಮಾಹಿತಿ ಪಡೆದುಕೊಂಡ ಅವರು ಶಾಲೆಯನ್ನು ನೋಡುವ ಇಂಗಿತ ವ್ಯಕ್ತಪಡಿಸಿ ಸಂಜೆಯ ವೇಳೆಗೆ ಶಾಲೆಗೆ ಭೇಟಿ ನೀಡಿದರು. ಕಟ್ಟಡ ಕಾಮಗಾರಿ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್‍ಕ್ಲಬ್ ಸಾಧನೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.
ರಾಜ್ಯಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದ್ದೀರಿ, ಈ ಕಾರ್ಯವನ್ನು ನಿರಂತರವಾಗಿ ಮುಂದುವರೆಸಿ ಎಂದ ಅವರು ಮುಂದಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಕ್ರೀಡೆ ಮತ್ತಿತರ ಶೈಕ್ಷಣಿಕ ಅಭಿವೃದ್ದಿಗೆ ಬೇಕಾದ ತರಬೇತಿಗಳನ್ನು ನೀಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಅವರು ಈ ಶಾಲೆಗೆ ಹಾಗೂ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಇದಕ್ಕಿಂತ ದೇವರು ಮೆಚ್ಚುವ ಕೆಲಸ ಬೇರೊಂದಿಲ್ಲ ಎಂದು ಸ್ಪೂರ್ತಿ ತುಂಬಿದರು.
ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಕಾಶ್ ಅಂಚನ್ ಶಾಲೆ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಮಂಗಳೂರಿನ ಉದ್ಯಮಿಗಳಾದ ದಿಲ್‍ರಾಜ್ ಆಳ್ವ, ಉಮಾನಾಥ ಕೋಟೆಕಾರ್, ಪ್ರಕಾಶ್ ಗರೋಡಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ಶಾಲಾ ಶಿಕ್ಷಕ ಗೋಪಾಲ್ ಕೊಂಗ್ರಬೆಟ್ಟು, ರಾಮಚಂದ್ರ ಕರೆಂಕಿ, ದಿಲೀಪ್ ಸಪಲ್ಯ ಡೆಚ್ಚಾರು ಹಾಜರಿದ್ದರು.

