ಉಳ್ಳಾಲ: ಕರ್ನಾಟಕ ರಾಜ್ಯ ಹಜ್ ಸಮಿತಿಯ ಮುಂದಿನ ಮೂರು ವರ್ಷದ ಅವಧಿಗೆ ಖ್ಯಾತ ಲೇಖಕ, ಸಂಘಟಕ, ಕನ್ನಡ ವಾಗ್ಮಿ ಕೆ.ಎಂ. ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಅವರ ಶಿಫಾರಸಿನಂತೆ ರಾಜ್ಯ ಸರಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಅವರು ಪ್ರಸಿದ್ಧ ಸುನ್ನೀ ವಾರ ಪತ್ರಿಕೆ “ಅಲ್ ಅನ್ಸಾರ್” ಹಾಗೂ “ಮೊಯಿಲಾಂಜಿ” ಮಾಸ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ಮಸೀದಿಯ ಧರ್ಮಗುರುಗಳಾಗಿರುವ ಅವರು ಸುನ್ನೀ ವಿದ್ಯಾರ್ಥಿ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಂತರರಾಷ್ಷ್ರೀಯ ವೇದಿಕೆ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2011 ರಲ್ಲಿ ಸುನ್ನೀ ಸಾಹಿತ್ಯ ಪುರಸ್ಕಾರ, 2015 ರಲ್ಲಿ ದಾರುಲ್ ಇರ್ಶಾದ್ ಬೆಳ್ಳಿಹಬ್ಬ ಪುರಸ್ಕಾರ, 2016 ರಲ್ಲಿ ನೂರುಲ್ ಉಲಮಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕೆ.ಎಂ. ಮೋಂಟುಗೋಳಿ ಧಾರ್ಮಿಕ ಶಿಕ್ಷಣದ ಜೊತೆಗೆ ಸಂತ ಅಲೋಶಿಯಸ್ ಕಾಲೇಜಿನಿಂದ ಪದವಿ ಹಾಗೂ ಮೈಸೂರು ವಿವಿ ಯಿಂದ ಸ್ನಾತಕ ಪದವಿಯನ್ನು ಪಡೆದಿದ್ದಾರೆ.
ಕರ್ನಾಟಕ ಹಜ್ ಸಮಿತಿಗೆ ಒಟ್ಟು 16 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಂಸದ ಕೆ. ರಹಮಾನ್ ಖಾನ್, ಸಚಿವರಾದ ಆರ್. ರೋಶನ್ ಬೇಗ್, ಶಾಸಕರಾದ ಕೆ. ಅಬ್ದುಲ್ ಜಬ್ಬಾರ್ ದಾವಣಗೆರೆ, ಬಿಬಿಎಂಪಿ ಸದಸ್ಯ ಮಹಮ್ಮದ್ ಝಮೀರ್ ಶಾ, ಮೈಸೂರು ಕಾರ್ಪೊರೇಟರ್ ಸುಹೈಲ್ ಬೇಗ್, ಶಿವಮೊಗ್ಗ ಕಾರ್ಪೊರೇಟರ್ ಸೈಯ್ಯದ್ ವಾಹಿದ್, ಮೌಲಾನಾ ಮಹಮ್ಮದ್ ಹನೀಫ್ ಅಫ್ಸರ್ ಅಝೀಝಿ ಶಿವಾಜಿನಗರ, ಮೌಲಾನಾ ಮೀರ್ ಶಾಯೆರ್ ಅಲಿ ದೊಡ್ಡಬಳ್ಳಾಪುರ, ಮಹಮ್ಮದ್ ಶಫೀಕ್ ಅರ್ಶದ್ ಜಯನಗರ, ಸಯ್ಯದ್ ಮಝರ್ ಹುಸೇನ್ ಕಲ್ಬುರ್ಗಿ, ಸಯ್ಯದ್ ಮುಜ್ತಬಾ ಹುಸೈನಿ ಜಹಗೀರ್ದಾರ್ ವಿಜಯಪುರ, ಜೆ.ಸಯ್ಯದ್ ಸನಾವುಲ್ಲಾ ಬೆನ್ಸನ್ ಟೌನ್, ಬಲ್ಕೀಸ್ ಬಾನು ಭದ್ರಾವತಿ ಹಾಗೂ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು ಮತ್ತು ರಾಜ್ಯ ಹಜ್ ಸಮಿತಿ ಕಾರ್ಯನಿರ್ವಾಹಕರನ್ನು ಸಮಿತಿಗೆ ನೂತನವಾಗಿ ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಅಲ್ಪಸಂಖ್ಯಾತ ಇಲಾಖೆಯ ಹಜ್ ಮತ್ತು ವಕ್ಫ್ ನ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅಕ್ರಮ್ ಭಾಷಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

