ನವದೆಹಲಿ: ಭಾರತದ ಏಕದಿನ ಹಾಗೂ ಟಿ 20 ನಾಯಕತ್ವ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ್ದಾರೆ. ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಉಳಿಯಲು ಧೋನಿ ನಿರ್ಧರಿಸಿದ್ದಾರೆ.2014ರ ಡಿಸೆಂಬರ್‌ನಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್ ಬಳಿಕ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಧೋನಿ, ಮುಂದಿನ ವಿಶ್ವಕಪ್‌ವರೆಗೂ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸುವ ಗುರಿ ಹೊತ್ತಿದ್ದರು. 2004 ಡಿಸೆಂಬರ್ 23 ರಂದು ಬಾಂಗ್ಲಾದೇಶದ ವಿರುದ್ಧದ ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆಗೊಂಡಿದ್ದ ಅವರನ್ನು 2007 ರಲ್ಲಿ ರಾಹುಲ್ ದ್ರಾವಿಡ್ ನಂತರ ನಾಯಕರಾಗಿ ನೇಮಕ ಮಾಡಲಾಗಿತ್ತು. ಜನವರಿ 15 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕ ದಿನ ಹಾಗೂ ಟಿ-20 ಪಂದ್ಯಗಳಿಗೆ ಅವರು ನಾಯಕರಾಗಿ ಲಭ್ಯವಿರುತ್ತಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಧೋನಿ ನಾಯಕತ್ವದಲ್ಲಿ ಭಾರತ ತಂಡ 2011 ರ ಏಕದಿನ ವಿಶ್ವ ಕಪ್, 2007ರ ಟಿ20 ವಿಶ್ವಕಪ್’ಅನ್ನು ಮುಡಿಗೇರಿಸಿಕೊಂಡಿತ್ತು. 2007 ರಿಂದ 2016ರ ಅವಧಿಯಲ್ಲಿ ಧೋನಿ ನಾಯಕರಾಗಿ ಆಡಿದ 191 ಪಂದ್ಯಗಳಲ್ಲಿ ಭಾರತ ತಂಡವು 104 ಪಂದ್ಯಗಳಲ್ಲಿ ಜಯಿಸಿದ್ದು, 72 ಪಂದ್ಯಗಳಲ್ಲಿ ಪರಾಭವಗೊಂಡಿದೆ. 4 ಟೈ ಆಗಿದ್ದು, 11 ರಲ್ಲಿ ಫಲಿತಾಂಶ ಬಂದಿಲ್ಲ. ಅದೇ ರೀತಿ 62 ಟಿ20 ಪಂದ್ಯಗಳಲ್ಲಿ 36 ಗೆಲುವು, 24 ಸೋಲು, ಒಂದು ಟೈ ಹಾಗೂ ಒಂದರಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

