ಹೈದರಾಬಾದ್: ಹೈದರಾಬಾದಿನ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿಶ್ವ ವಿದ್ಯಾಲಯವು ಸೋಮವಾರ ಚಿತ್ರನಟ ಶಾರುಖ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ವಿಶ್ವ ವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರುಶಾರುಖ್ ಖಾನ್ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಿದರು.
ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಶಾರುಖ್ ಖಾನ್ ಅವರು ವಿಶ್ವ ವಿದ್ಯಾಲಯಕ್ಕೆ ಧನ್ಯವಾದ ಸಲ್ಲಿಸಿ ‘ನನ್ನ ತಂದೆ ತಾಯಿಗೆ ಮೌಲಾನಾ ಆಜಾದ್ ಬಗ್ಗೆ ಅಪಾರ ಗೌರವ. ಇಂದು ಇರುತ್ತಿದ್ದರೆ ಅವರಿಗೆ ಅತೀವ ಸಂತಸವಾಗುತ್ತಿತ್ತು’ ಎಂದು ಹೇಳಿದರು.
2017ರ ನವೆಂಬರ್ 2ರಂದು ತಮ್ಮ 51ನೇ ಜನ್ಮದಿನವನ್ನು ಆಚರಿಸಲಿರುವ ಚಿತ್ರ ನಟ ದೆಹಲಿ ವಿಶ್ವ ವಿದ್ಯಾಲಯದ ಹನ್ಸ್ರಾಜ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಬಳಿಕ ಜಾಮಿಯಾ ಮಿಲಿಯಾ ವಿಶ್ವ ವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿದ್ದರು. ಆದರೆ ಮಧ್ಯದಲ್ಲೇ ಶಿಕ್ಷಣ ಬಿಟ್ಟು ಪೂರ್ಣಾವಧಿಯನ್ನು ನಟನೆಗೆ ಮೀಸಲಿಟ್ಟಿದ್ದರು. ಚಿಕ್ಕಂದಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಶಾರುಖ್ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೂ ಸ್ವಲ್ಪ ಕಾಲ ಹೋಗಿದ್ದರು.

