ಬಜಪೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿ ತಾಯಿ ಮಗ ಮೃತಪಟ್ಟು ಮಗಳು ಬದುಕುಳಿದ ಘಟನೆ ಸೋಮವಾರ ಬೆಳಿಗ್ಗೆ ಬಜಪೆ ಪೊಲೀಸ್ ಹಾಗೂ ವ್ಯಾಪ್ತಿಯ ಪೆರ್ಮುದೆ ಮಾರ್ಕೆಟ್ ಬಳಿಯ ಮನೆಯೊಂದರಲ್ಲಿ ನಡೆದಿದೆ.
ಗೋಪಿ(65) ಹಾಗೂ ಸುರೇಶ(48) ಮೃತಪಟ್ಟಿದ್ದು, ಸುರೇಶನ ತಂಗಿ ಶೋಭಾ (45) ಬದುಕುಳಿದಿದ್ದಾಳೆ. ಮೊದಲಿಗೆ ತಾಯಿ ಮಗಳು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಮನೆಯ ಬಾವಿಗೆ ಹಾರಿದ್ದು, ಮೊದಲೇ ಅಸೌಖ್ಯದಲ್ಲಿದ್ದ ತಾಯಿ ತಕ್ಷಣವೇ ಮೃತಪಟ್ಟಿರುವುದಾಗಿ ಹೇಳಲಾಗಿದೆ. ತಾಯಿ ತಂಗಿ ಬಾವಿಗೆ ಹಾರಿದ್ದು ಗಮನಿಸಿದ ಸುರೇಶ ಮನೆಯಲ್ಲಿ ಡಬ್ಬಿಯಲ್ಲಿದ್ದ ಪೈಂಟ್ ನಿಂದ ಕೈ ಬೆರಳ ಮೂಲಕವೇ ಅಂಗಳದ ಎದುರಿನ ಗೋಡೆ ಹಾಗೂ ತನ್ನ ಕೋಣೆಯ ಗೋಡೆಯಲ್ಲಿ ಡೆತ್ ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ:
ಪಕ್ಕದ ಮನೆಯ ನಾರಾಯಣ ಎಂಬಾತ ಕೆಲಸಕ್ಕೆಂದು ಬಂದಾತ ಹಾಲು ಪೇಪರ್ ಗೇಟ್ ಬಳಿ ಗಮನಿಸಿ ಶೋಭಾಳನ್ನು ಕರೆದಾಗ ಅವರು ಬಾವಿಯಲ್ಲಿರುವುದನ್ನು ಗಮನಿಸಿ ಹಗ್ಗ ಚಯರ್ ಇಳಿಸಿ ಶೋಭಾ ಅವರನ್ನು ಮೇಲಕ್ಕೆತ್ತಿದರು. ಕುಡಿಯಲು ನೀರು ತಂದು ಕೊಡುವಂತೆ ಶೋಭಾ ಕೇಳಿದಾಗ, ಮನೆಯೊಳಗೆ ಹೋದ ನಾರಾಯಣ ಅವರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಸುರೇಶ ಅವರನ್ನು ಕಂಡು ಪೊಲೀಸರು ಮತ್ತು ಸ್ಥಳಿಯರಿಗೆ ಮಾಹಿತಿ ನೀಡಿದರು.
ಬಜಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಶೋಭಾ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದು, ಗೋಪಿ ಹಾಗೂ ಸುರೇಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು.
ಸುರೇಶ ಹಾಗೂ ಆಶಾ ಪರಸ್ಪರ ಸುಮಾರು ಎಂಟು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು. ಸುರೇಶ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದನು.
ತನ್ನ ಮೂವರ ಸಾವಿಗೆ ತನ್ನ ಪತ್ನಿ ಆಶಾ ಹಾಗೂ ಆಕೆಯ ಸ್ನೇಹಿತೆ ಸುನೀತಾ ಮಣಿಪಾಲ ಅವರೇ ಕಾರಣ ಮತ್ತು ನಮ್ಮ ಜಾಗ ಹಾಗೂ ಆಸ್ತಿಯಲ್ಲಿ ಆಶಾಗೆ ಯಾವುದೇ ಹಕ್ಕು ಇರುವುದಿಲ್ಲ ಎಂದೆಲ್ಲ ಪೈಂಟ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಸುರೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಜಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

