ಚೆನ್ನೈ: ವಾರ್ದಾ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದೆ. ಗಂಟೆಗೆ 150 ಕಿಮೀ ವೇಗದಲ್ಲಿ ಚಲಿಸುತ್ತಿರುವ ಚಂಡಮಾರುತ ತಮಿಳುನಾಡಿನ ಕರಾವಳಿ ಭಾಗದಲ್ಲಿ ರೌದ್ರಾವತಾರ ತಾಳಿದೆ. ಚೆನ್ನೈ, ತಿರುವಳ್ಳೂರ್ ಮತ್ತು ಕಾಂಚೀಪುರಂನಲ್ಲಿ ಇಂದು ಸೋಮಮಾರ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ. ಗಾಳಿಯ ರಭಸಕ್ಕೆ ಅನೇಕ ಮರಗಳು ಧರೆಗುರುಳಿವೆ. ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಚೆನ್ನೈನ ಸಾಕಷ್ಟು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭೂಕುಸಿತ ಸಂಭವಿಸುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ಆಂಧ್ರದಿಂದ ಚೆನ್ನೈಗೆ ಓಡಾಡುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.

vardha_cyclone_760x400

ರಕ್ಷಣಾ ಕಾರ್ಯಕ್ಕಾಗಿ ಎನ್’ಡಿಆರ್’ಎಫ್’ನ 15 ತಂಡಗಳನ್ನು ತಮಿಳುನಾಡು ಹಾಗು ಆಂಧ್ರದ ಕರಾವಳಿ ಭಾಗಗಳಿಗೆ ಈಗಾಗಲೇ ನಿಯೋಜಿಸಲಾಗಿದೆ. ಪ್ರತೀ ತಂಡದಲ್ಲೂ 45 ಸಿಬ್ಬಂದಿ ಇದ್ದು, ತೀವ್ರತರವಾದ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ತರಬೇತಿಯನ್ನು ಹೊಂದಿದವರಾಗಿದ್ದಾರೆ. ಅಗತ್ಯಬಿದ್ದರೆ ಎನ್’ಡಿಆರ್’ಎಫ್ ಜೊತೆಗೆ ಸೇನಾ ಸಿಬ್ಬಂದಿಯನ್ನೂ ನಿಯೋಜಿಸಲು ಅಣಿಗೊಳಿಸಲಾಗಿದೆ.

ಕರ್ನಾಟಕಕ್ಕೂ ಎಫೆಕ್ಟ್:
ಇದೇ ವೇಳೆ, ಕರ್ನಾಟಕದ ಮೇಲೂ ಚಂಡಮಾರುತದ ಪರಿಣಾಮ ವ್ಯಕ್ತವಾಗಲಿದೆ. ಬೆಂಗಳೂರು, ಕೋಲಾರ ಮತ್ತು ಕೆಜಿಎಫ್ ಭಾಗಗಳಲ್ಲಿ ಡಿ. 13 ಮತ್ತು 14ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತ ‘ವಾರ್ಧಾ’ಗೂ ಪಾಕಿಸ್ತಾನಕ್ಕೂ ಇದೆ ನೇರ ನಂಟು:
ಭಾರತದ ಆಗ್ನೇಯ ಭಾಗದ ಕರಾವಳಿ ಪ್ರದೇಶದಲ್ಲಿ ದಾಂದುಡಿ ಮಾಡುತ್ತಿರುವ ವಾರ್ಧಾ ಚಂಡಮಾರುತದ ಹೆಸರಿನ ಮೂಲ ಪಾಕಿಸ್ತಾನವಾಗಿದೆ. ಈ ಚಂಡಮಾರುತಕ್ಕೆ ‘ವಾರ್ಧಾ’ ಎಂದು ಹೆಸರು ಇಟ್ಟಿದ್ದೇ ಪಾಕಿಸ್ತಾನ. ಅರೇಬಿಕ್ ಮತ್ತು ಉರ್ದು ಭಾಷೆಯಲ್ಲಿ ಇದರ ಅರ್ಥ ಕೆಂಪು ಗುಲಾಬಿ ಎಂದಿದೆ.

ವಾರ್ಧಾ ಚಂಡಮಾರುತ ಈ ವರ್ಷ ಬಂಗಾಳಕೊಲ್ಲಿಯಲ್ಲಿ ಉಂಟಾದ ನಾಲ್ಕನೇ ಚಂಡಮಾರುತವಾಗಿದೆ. ಈ ಮುನ್ನ ರೌನು, ಕ್ಯಾಂಟ್‌ ಮತ್ತು ನಾಡಾ ಚಂಡಮಾರುತಗಳು ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿದ್ದವು.

ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಅಪ್ಪಳಿಸುವ ಚಂಡಮಾರುತಗಳ ಹೆಸರನ್ನು ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಥಾಯ್ಲೆಂಡ್, ಮಯನ್ಮಾರ್, ಮಾಲ್ಡೀವ್ಸ್ ಮತ್ತು ಓಮನ್ ರಾಷ್ಟ್ರಗಳು ಸರದಿ ಪ್ರಕಾರ ನಿರ್ಧರಿಸಲಿವೆ. ಕೆಲ ದಿನಗಳ ಹಿಂದೆ ಸಂಭವಿಸಿದ ನಾಡಾ ಚಂಡಮಾರುತದ ಹೆಸರನ್ನು ಓಮನ್ ದೇಶ ನಾಮಕರಣ ಮಾಡಿತ್ತು. ಈ ಬಾರಿಯ ಚಂಡಮಾರುತಕ್ಕೆ ನಾಮಕರಣ ಮಾಡುವ ಸರದಿ ಪಾಕಿಸ್ತಾನದ್ದಾಗಿತ್ತು.

ಇದೇ ವೇಳೆ, ತಮಿಳುನಾಡು ಸರಕಾರ ಕರಾವಳಿ ಭಾಗದ ಜನರಿಗೆ ಸಹಾಯವಾಣಿ ನಂಬರ್ ನೀಡಿದೆ.
044-25619206, 25619511, 25384965, 25383694, 25383694, 25367823, 25387570.

By Suddi9

Leave a Reply

Your email address will not be published. Required fields are marked *