ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಹ್ಯಾವ್ಲೋಕ್ ದ್ವೀಪದಲ್ಲಿ ಭಾರಿ ಮಳೆ, ಗಾಳಿಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಸುಮಾರು 1000ಕ್ಕೂ ಹೆಚ್ಚು ಮಂದಿ ಪ್ರವಾಸಿಗರ ಪೈಕಿ 425 ಮಂದಿಯನ್ನು ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ದ್ವೀಪದಿಂದ ತೆರವುಗೊಳಿಸುವ ಮೂಲಕ ರಕ್ಷಿಸಿವೆ.
ಚಂಡಮಾರುತದ ಪರಿಣಾಮವಾಗಿ 1000ಕ್ಕೂ ಹೆಚ್ಚು ಪ್ರವಾಸಿಗಳು ಈ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಎಲ್ಲ ಪ್ರವಾಸಿಗಳನ್ನೂ ದ್ವೀಪದಲ್ಲಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ ಭಾರಿ ಮಳೆ ಬಿರುಗಾಳಿ ಕಾರಣ ಅವರನ್ನು ಅಲ್ಲಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ.
ಶುಕ್ರವಾರ 425 ಮಂದಿ ಪ್ರವಾಸಿಗರನ್ನು ದ್ವೀಪದಿಂದ ತೆರವುಗೊಳಿಸಲಾಗಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.

