ಚೆನ್ನೈ: ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಇನ್ನಷ್ಟು ಚಿಂತಾಜನಕವಾಗಿದೆ.
ತೀವ್ರ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ ಸೇರಿ ಬಹು ಅಂಗಾಗ ವೈಫಲ್ಯದಿಂದ ಸೆಪ್ಟೆಂಬರ್ 22 ರಂದು ತಮಿಳುನಾಡು ಸಿಎಂ ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಅಂದಿನಿಂದಲೂ ಅಮ್ಮಾ ಸಾವು ಬದುಕಿನ ನಡುವೆ ತೀವ್ರ ಹೋರಾಟ ನಡೆಸಿದರು. ಅಮ್ಮಾ ಆರೋಗ್ಯ ಚೇತರಿಕೆಗಾಗಿ ತಿಂಗಳಿನಿಂದಲೂ ಅಪೋಲೋ ಆಸ್ಪತ್ರೆ ವೈದ್ಯರು ಅವಿರತ ಪ್ರಯತ್ನ ನಡೆಸಿದ್ದರು.
ಆದರೆ ಚೆನ್ನೈ ಅಪೋಲೋ ಆಸ್ಪತ್ರೆ ವೈದ್ಯರ ಚಿಕಿತ್ಸೆ ಅಮ್ಮನಿಗೆ ನೆರವಾಗಲಿಲ್ಲ. ಕೈ ಚೆಲ್ಲಿ ಕೂತಿದ್ದ ಅಪೋಲೋ ವೈದ್ಯರು ಅಮ್ಮನ ಚಿಕಿತ್ಸೆಗೆ ಲಂಡನ್ ವೈದ್ಯರ ಮೊರೆ ಹೋಗಿದ್ದರು. ಲಂಡನ್ನಿನಿಂದ ಬಂದ ವೈದ್ಯರು ಜಯಲಲಿತಾಗೆ ಸೂಕ್ತ ಚಿಕಿತ್ಸೆ ನೀಡಿದ್ರು. ಕೆಲ ದಿನಗಳ ಹಿಂದೆಯಷ್ಟೆ ಅಮ್ಮಾ ಆರೋಗ್ಯ ಚೇತರಿಕೆ ಕಂಡಿದೆ ಅಂತಾ ಎಐಡಿಎಂಕೆ ಪಕ್ಷದ ವರಿಷ್ಠರು ಸೇರಿ ಅಪೋಲೋ ಆಸ್ಪತ್ರೆ ಮುಖ್ಯಸ್ಥರು ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದರು. ಆದರೂ ಅಮ್ಮಾ ಆರೋಗ್ಯದ ಬಗ್ಗೆ ಕೆಲ ಗೊಂದಲಗಳೊಂದಿಗೆ ಅನುಮಾನಗಳು ತಳುಕುಹಾಕುತ್ತಿದ್ದವು. ಆದರೆ ಎಲ್ಲವೂ ಅಂದುಕೊಂಡಂತೆ ಅಮ್ಮಾ ಗುಣಮುಖ ಆಗುತ್ತಿದ್ದಾರೆ ಎನ್ನುವಷ್ಟರಲ್ಲೇ ಇಂದು ಸಂಜೆ ತಮಿಳಿಗರ ಪಾಲಿಗೆ ಬರ ಸಿಡಿಲೊಂದು ಬಂದೆರಗಿತ್ತು.
ಐಸಿಯುನಲ್ಲಿರುವ ಜಯಲಲಿತಾಗೆ ನೀಡುತ್ತಿರುವ ಆಹಾರದಲ್ಲಿ ಏರುಪೇರು ಆಗಿತ್ತು. ಇದರ ಪರಿಣಾಮವಾಗಿ ಪ್ರೋಟಿನ್ನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿ ರಕ್ತ ಸಂಚಾರ ಏರುಪೇರಾಯಿತು. ಹೀಗಾಗಿ ನಿನ್ನೆ ಸಂಜೆ ಜಯಲಲಿತಾಗೆ ಹೃದಯಾಘಾತವಾಗಿದೆ. ಜಯಲಲಿತಾರ ಅನಾರೋಗ್ಯದಿಂದ ತಕ್ಷಣವೇ ಎಚ್ಚೆತ್ತ ವೈದ್ಯರು ಕೂಡಲೇ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಇಂದು ಬೆಳಗ್ಗೆ ಆಂಜಿಯೋಗ್ರಾಮ್ ಪರೀಕ್ಷೆ ಮಾಡಿ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ತೀವ್ರ ನಿಗಾ ಘಟಕದಲ್ಲಿ ಜಯಲಲಿತಾಗೆ ಚಿಕಿತ್ಸೆ ನೀಡಲಾಗುತ್ತಿದೆ.
ಜಯಾಲಲಿತಾ ಗಂಭೀರ: ಅಪೊಲೋ ಆಸ್ಪತ್ರೆಯಲ್ಲೇ ತುರ್ತು ಸಚಿವ ಸಂಪುಟ ಸಭೆ:
ಜಯಾಗೆ ಹೃದಾಯಾಘಾತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಿದ್ಯಾಸಾಗರ ರಾವ್, ಹಂಗಾಮಿ ಸಿಎಂ ಪನೀರ್’ಸೆಲ್ವಂ ನೇತೃತ್ವದಲ್ಲಿ ಅಪೊಲೋ ಆಸ್ಪತ್ರೆಯಲ್ಲೇ ತುರ್ತು ಸಚಿವ ಸಂಪುಟ ಆರಂಭವಾಗಿದೆ. ಜಯಾ ಬಗ್ಗೆ ಆಸ್ಪತ್ರೆ ವೈದ್ಯರಿಂದ ಸ್ಪಷ್ಟ ಮಾಹಿತಿ ರಾಜ್ಯಪಾಲರು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ತುರ್ತು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ.
ಇನ್ನೊಂದೆಡೆ ತಮಿಳುನಾಡಿನಾದ್ಯಂತ ಹೈ ಅಲರ್ಟ್ ಮುಂದುವರೆದಿದೆಮ ನಿಷೇಧಾಜ್ಞೆಯ ಹೊರತೂ, ಜನರು ಆಸ್ಪತ್ರೆಯ ಹೊರಗೆ ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ 9 ಅರೆಸೇನಾ ತುಕಡಿಗಳನ್ನು ಸನ್ನದ್ಧಗೊಳಿಸಲಾಗಿದೆ. ಅಗತ್ಯ ಬಿದ್ದರೆ ವಿಮಾನದ ಮೂಲಕ ಅವುಗಳನ್ನು ರವಾನಿಸುವ ಯೋಜನೆ ಇದೆ. ಕರ್ನಾಟಕ ರಾಜ್ಯದಿಂದ ತಮಿಳುನಾಡಿಗೆ ಹೋಗುವ ಎಲ್ಲಾ ಕೆಎಸ್’ಆರ್’ಟಿಸಿ ಬಸ್ಸು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

