ಸಹಕಾರ ಜೀವನದ ಪಾಠವನ್ನು ನಾವು ಕಾಗೆ, ಕೋಳಿ ಇರುವೆಗಳಿಂದ ಕಲಿಯಬಹುದು. ಕಾಗೆಯು ಒಂದು ಅಗುಳವನ್ನು ಕಂಡರೆ ಕಾ ಕಾ ಎಂದು ತನ್ನ ಬಳಗವನ್ನು ಕರೆಯುತ್ತಿದೆ. ಅದೇ ರೀತಿ ಕೋಳಿಯು ತನ್ನವರನ್ನು ಆಹಾರಕ್ಕಾಗಿ ಕರೆದುಕೊಂಡು ಹೋಗುತ್ತದೆ. ಇರುವೆಗಳು ಕೂಡ ಏನೇ ಸಿಕ್ಕಲಿ ಒಟ್ಟಾಗಿ ಹಂಚಿಕೊಂಡು ತಿನ್ನುತ್ತದೆ. ಸುಖ ದುಃಖ, ನೋವು ನಲಿವುಗಳನ್ನು, ಬೇವು ಬೆಲ್ಲಗಳನ್ನು ಒಟ್ಟಾಗಿ ಆಸ್ವಾದಿಸುತ್ತದೆ. ಈ ಪ್ರಾಣಿ ಪಕ್ಷಿಗಳಿಂದ ನಾವು ಸಹಕಾರದ ತತ್ವಗಳನ್ನು ಕಲಿಯಬಹುದು. ಆದರೆ ಮಾನವ ಅದಕ್ಕೆ ಹೊರತಾಗಿ ತನಗೆ ಏನೇ ಸಿಕ್ಕಿದರೂ ತನ್ನದೆನ್ನುವ ಮನೋಭಾವನೆಯುಳ್ಳವನಾಗಿದ್ದಾನೆ. ತನಗೆ ಸಿಕ್ಕಿದನ್ನು ಅಲ್ಲದೆ ಬೇರೆಯವರ ಪಾಲನ್ನು ಕೂಡ ತಾನೇ ಸ್ವಾಹಾ ಮಾಡುಲು ತಯಾರಿರುತ್ತಾನೆ. ಅದು ಸಿಗದಿದ್ದಾಗ ನಿರಾಶನಾಗುತ್ತಾನೆ. ನಿರಾಸೆಯು ದುಃಖಕ್ಕೆ ಕಾರಣವಾಗುತ್ತದೆ. ಇದರಿಂದ ಜೀವನಕ್ಕೆ ತೊಂದರೆಯಾಗಲು ಸಾದ್ಯ. ಸಹಕಾರ ಜೀವನದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ.
ಸಹಕಾರ ಮನೋಧರ್ಮವನ್ನು ನಾವು ಬೆಳೆಸಿದರೆ ಅನೇಕ ಸಮಸ್ಯೆಗಳು ತನ್ನಿಂದ ತಾನೆ ಕಣ್ಮರೆಯಾಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳನ್ನು ಉಪಶಮನಗೊಳಿಸಬಹುದು. ಮಾನಸಿಕ ತುಮುಲಗಳನ್ನು ದೂರ ಮಾಡಿ, ಮನೋರೋಗಿಗಳ ಸಂಖ್ಯೆ ಕಡಿಮೆ ಮಾಡಬಹುದು. ಇಂದು ಸಮಾಜದಲ್ಲಿ ಕಂಡು ಬರುವ ಅನೇಕ ರೀತಿಯ ಅನಾಚಾರಗಳಿಗೆ ಈ ಸಹಕಾರ ತತ್ವ ರಾಮಬಾಣವಾಗಿದೆ. ಸರ್ಕಾರ ಈ ಅನಾಚಾರಗಳನ್ನು ದೂರ ಮಾಡಲು ಅನೇಕ ರೀತಿಯ ಸವಲತ್ತುಗಳನ್ನು ಒದಗಿಸಿದರೂ ಅದರಿಂದ ಪ್ರಯೋಜನವಾಗಿಲ್ಲ. ಸರ್ಕಾರ ಸಮಾಜದ ಸಮಸ್ಯೆಗಳನ್ನು ದೂರ ಮಾಡಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಈ ಹಣವನ್ನು ನಾವೆಲ್ಲರೂ ಸಹಕಾರ ಮನೋಭಾವನೆಯ ತತ್ವವನ್ನು ಬೆಳೆಸಿದರೆ ಕಡಿಮೆ ಮಾಡಬಹುದು.
ಮಾತ್ರವಲ್ಲ ಸಹಕಾರ ತತ್ವ ಸರ್ವೇ ಜನಾ ಸುಖಿಮೋ ಭವಂತೂ ಎನ್ನುತ್ತದೆ. ಇದನ್ನು ಭಗವಂತನೂ ಮೆಚ್ಚಬಲ್ಲ. ಸರ್ವರ ಒಳಿತಿನಲ್ಲಿ ತನ್ನ ಒಳಿತನ್ನು ಕಾಣುವ ಮನೋಭಾವನೆ ಎಷ್ಟೊಂದು ಸುಂದರ ಅಲ್ಲವೇ? ಈ ಉದಾತ ದೃಷ್ಟಿಯು ಎಲ್ಲರಲ್ಲಿ ಬೆಳೆದರೆ ಬೇರೆ ರಾಮರಾಜ್ಯಬೇಕೆ? ಸತ್ತ ನಂತರ ಗಳಿಸುವ ಸ್ವರ್ಗದ ಅಗತ್ಯವಿದೆಯೇ? ಹಂಚಿಕೊಂಡು ತಿನ್ನುವ ಬುದ್ದಿಯು ಬಂದರೆ ಅದುವೇ ಕಲ್ಯಾಣ ಸಿದ್ದಿ ಎಂದು ಬಸವಣ್ಣ ಹೇಳಿದ್ದಾರೆ.
ಇಂದು ಸರ್ಕಾರ ಸಹಕಾರಿ ಸಂಘ, ಸಹಕಾರಿ ಬ್ಯಾಂಕುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜನರ ಸಮಸ್ಯೆಗಳಿಗೆ ಜನರೇ ಪರಿಹಾರ ಕಂಡುಕೊಳ್ಳುವ ಈ ಕ್ಷೇತ್ರ ಸರ್ಕಾರಕ್ಕೆ ಇಷ್ಟವಾಗಿದೆ ಹೀಗಾಗಿ ಅದಕ್ಕೆ ಅನೇಕ ರೀತಿಯ ಪ್ರೋತ್ತಾಹ ನೀಡುತ್ತಿದೆ, ಇತ್ತೀಚೆಗೆ ಸಹಕಾರಿ ಸಂಘಗಳಿಗೆ ಇ- ಸ್ಟಾಂಪಿಂಗ್,ಆರ್.ಟಿ.ಜಿ.ಎಸ್ ಅವಕಾಶ, ಬ್ಯಾಂಕಿನಲ್ಲಿ ಸಿಗುವ ವಿವಿಧ ಸೇವೆಗಳನ್ನು ಸಹಕಾರಿಯಲ್ಲಿ ಪಡೆಯುವ ಹಂತಗಳು ಬರುತ್ತಿವೆ.ಅಲ್ಲದೆ ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ಸಹಕಾರ ಸಂಘಗಳ ಮೂಲಕ ಸರ್ಕಾರದ ವಿವಿಧ ಸೇವೆಗಳನ್ನು ಜನರಿಗೆ ನೀಡುವ ಕೆಲಸ ಕಾರ್ಯಗಳು ನಡೆಯಿತ್ತಿದೆ.
ಪ್ರಚಲಿತ ಸಮಾಜ ಅನೇಕ ರೀತಿಯ ಸಮಾಜಿಕ ಪಿಡುಗುಗಳಿಂದ ತ್ತರಿಸುತ್ತಿದೆ. ಶಾಂತಿಯು ದೂರವಾಗಿ,ಅಸೂಯೆ,ಕೊಲೆ ಸುಲಿಗೆ ಮುಂತಾದ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚಗಿವೆ. ಮಾನವ ಸುಖವನ್ನು ಅರಸುತ್ತಾ ಮದ್ಯ , ಮಾದಕ ವಸ್ತುಗಳ ಸೇವನೆಗೆ ಶರಣು ಹೋಗುತ್ತಿದ್ದಾನೆ.ತನ್ನ ಕ್ಷಣಿಕ ಸುಖಕ್ಕಾಗಿ ಸಮಾಜ ಒಡೆಯುವ ಕಾರ್ಯ ನಡೆಸುತ್ತಿರುವುದು ನಮಗೆ ಕಂಡುಬರುತ್ತಿದೆ. ಈ ಸಮಸ್ಯೆಗಳನ್ನು ದೂರ ಮಾಡಲು ಸಹಕಾರ ಜೀವನವೇ ದಿವ್ಯ ಔಷಧಿಯಾಗಿದೆ. ಗಾಂಧೀಜಿಯವರು ಕನಸು ಕಂಡ ಸರ್ವೋದಯ ಸಮಾಜಕ್ಕೆ ಸಹಕಾರ ತತ್ವವೇ ಅಡಿಗಲ್ಲು. ಈ ಸಹಕಾರ ಮನೋಧರ್ಮ ಭಾರತದ ಭೂಮಿಕೆಯಲ್ಲಿ ಬೀಜರೂಪವಾಗಿ ಇದ್ದದನ್ನು ಗಮನಿಸಿದ ಅವರು ಈ ಚಳುವಳಿಗೆ ತನ್ನದೆ ಆದ ಕಾಯಕಲ್ಪ ನೀಡಿದರು.ಗಾಂಧಿಜಿಯವರ ಪ್ರಕಾರ ಸಮಾಜದಲ್ಲಿ ವ್ಯಕ್ತಿಗಿಂತ ಸಂಘ ದೊಡ್ಡದು. ಪ್ರತಿಯೊಬ್ಬರೂ ತಾನು ಮಾಡುವ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದಾಗ ಹೊಸ ಸಮಾಜದ ನಿರ್ಮಾಣ ಸಾದ್ಯವಾಗುತ್ತದೆ. ನಮ್ಮ ದೇಶದ ಸಂಸ್ಕತಿಯು ಇತರ ದೇಶಗಳಿಗೆ ಮಾದರಿಯಾಗಿದೆ. ಸಹಕಾರ ಮನೋಬಾವನೆಯನ್ನು ನಾವು ಬೆಳೆಸಿಕೊಂಡರೆ ಅದರಿಂದ ಉನ್ನತವಾದ ಅಭಿವೃಧಿಯನ್ನು ಸಾಧಿಸಬಹುದಾಗಿದೆ.
ಇಂದು ಕಂಡುಬರುವ ಆರ್ಥಿಕ ಕ್ರಾಂತಿಯು ಕೂಡ ಸಹಕಾರದ ಒಂದು ಭಾಗವಾಗಿದೆ ಎಂದರೆ ತಪ್ಪಾಗಲಾರದು ಇಲ್ಲವಾದಲ್ಲಿ ದೇಶದಲ್ಲಿ ಕಷ್ಟದ ಪರಿಸ್ಥಿತಿಯು ಎದುರಾಗುತ್ತಿತ್ತು.ಸಹಕಾರದಿಂದ ನಾವು ಎನ್ನನ್ನೂ ಕೂಡ ಸಾಧಿಸಲು ಸಾದ್ಯ ಎಂಬುದನ್ನು ನಮ್ಮ ಸಹಕಾರ ಸಂಘಗಳು ತೋರಿಸಿವೆ.ಯಾವುದೇ ರಾಷ್ಟೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ಸಹಕಾರಿ ಕ್ಷೇತ್ರ ಮುಂದುವರೆಯುತ್ತಿದೆ. ಅದರಲ್ಲಿಯೂ ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ಆಡು ಮಟ್ಟದ ಸೊಪ್ಪಿಲ್ಲ ಸಹಕಾರ ಕ್ಷೇತ್ರ ತಲುಪಿರದ ವಸ್ತುವಿಲ್ಲ ಎಂಬಂತೆ ಎಲ್ಲಾ ರೀತಿಯ ಸೇವೆ ಗಳನ್ನು ನೀಡುವ ಮೂಲಕ ಸಹಕಾರಿ ಚಳುವಳಿಯು ಮುಂದುವರೆಯುತ್ತಿದೆ ಶತಮಾನ ಸಂದರೂ ಅದರಲ್ಲಿ ಯಾವುದೇ ರೀತಿಯ ಕೊರತೆಗಳು ಕಂಡುಬರದೆ ಮುಂದುವರೆಯುತ್ತಿರುವುದು ಅತ್ಯಂತ ಪ್ರಶಂಸನಿಯವಾಗಿದೆ.
ದೇಶದಲ್ಲಿ ಸಹಕಾರ ಸಪ್ತಾಹ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಮಾರಕವಾಗಿರುವ ವಿವಿಧ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಗಮನ ನೀಡಬೇಕು. ಸಹಕಾರ ತತ್ವಗಳ ಪ್ರಚಾರಕ್ಕೆ ಆದ್ಯತೆ ನೀಡಿ ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರ ಮತ್ತಷ್ಟು ಬೆಳೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಈ ಸಹಕಾರ ಸಪ್ತಾಹ ಅದಕ್ಕೆ ದೃಷ್ಠಾಂತ ಒದಗಿಸಲಿ ಎಂಬುದು ನಮ್ಮ ಹಾರೈಕೆ.
ರಾಘವೇಂದ್ರ ಪ್ರಭು ಕರ್ವಾಲು ಉಡುಪಿ

