ಮೂಡುಬಿದಿರೆ: 2016ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಲ್.ಸಿ.ಸೋನ್ಸ್ ಅವರನ್ನು ಮೂಡುಬಿದಿರೆ ಸಮಾಜ ಮಂದಿರ ಸಭಾ ಹಾಗೂ ಮೂಡುಬಿದಿರೆ ಪುರಸಭೆ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮ ಬುಧವಾರ ಸಂಜೆ ನಡೆಯಿತು.

sanmana

ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕಾೈ ಗಣಪಯ್ಯ ಭಟ್ ಅಭಿನಂದನಾ ಭಾಷಣ ಮಾಡುತ್ತಾ, ಕೃಷಿಯಲ್ಲಿ ಹೊಸ ಸಾಧ್ಯತೆ, ಲಾಭದಾಯಕ ಕೃಷಿ, ಕೃಷಿಗೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಹೀಗೆ ಕೃಷಿ ಕ್ಷೇತ್ರವನ್ನು ಹಲವಾರು ವಿಧದಲ್ಲಿ ಉತ್ತುಂಗಕ್ಕೇರಿಸಿದವರು ಡಾ.ಸೋನ್ಸ್. ಬಹುವಿಧ ಕೃಷಿಯಿಂದ ಕೃಷಿ ಕ್ಷೇತ್ರವನ್ನು ಪ್ರವಾಸೋದ್ಯಮದಲ್ಲೂ ಪರಿಚಯಿಸಿದ ಕೀರ್ತಿ ಡಾ.ಎಲ್.ಸಿ ಸೋನ್ಸ್ ಅವರಿಗೆ ಸಲ್ಲುತ್ತದೆ. ಮೂಡುಬಿದಿರೆಯನ್ನು ಕೃಷಿ ಕ್ಷೇತ್ರದಲ್ಲಿ ದೇಶ-ವಿದೇಶಗಳಿಗೆ ಪರಿಚಯಿಸಿದ ಸೋನ್ಸ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಿಕ್ಕಿರುವುದು ಸಮಸ್ತ ಮೂಡುಬಿದಿರೆಗೆ ಸಿಕ್ಕಿರುವ ಗೌರವ ಎಂದರು.

ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಯಾವುದೇ ಗೊಂದಲವಿಲ್ಲದೆ, ಪಾರದರ್ಶಕ ರೀತಿಯಲ್ಲಿ ಮಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮೂರಿನ ಹೆಮ್ಮೆಯ ಸೋನ್ಸ್‍ಗೆ ಯಾವುದೇ ಶಿಫಾರಸ್ಸಿಲ್ಲದೆ ಪ್ರಶಸ್ತಿ ಸಿಕ್ಕಿರುವುದು ಮೂಡುಬಿದಿರೆಯ ಜನತೆಯ ಭಾಗ್ಯ ಎಂದರು.

ರಾಜಕೀಯ ರಂಗದಲ್ಲಿ 50 ವರ್ಷಗಳನ್ನು ಪೂರೈಸಿದ, ಸಹಕಾರಿ ರತ್ನ ಪುರಸ್ಕೃತ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಹಾಗೂ ಸತತ ಎರಡನೇ ಬಾರಿ ನ್ಯಾಕ್‍ನಿಂದ ಎ ಗ್ರೇಡ್ ಪಡೆದ ಶ್ರೀಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ದೀಕ್ಷಿತ್ ಅವರನ್ನು ಅಭಿನಂದಿಸಲಾಯಿತು.

ಮೂಡುಬಿದಿರೆ ಪುರಸಭಾ ಅಧ್ಯಕ್ಷ ರೂಪಾ ಸಂತೋಷ್ ಶೆಟ್ಟಿ, ಸಮಾಜಮಂದಿರ ಸಭಾದ ಕಾರ್ಯದರ್ಶಿ ಉದಯಶಂಕರ ಪ್ರಭು ಉಪಸ್ಥಿತರಿದ್ದರು. ಪುರಸಭಾ ಸದಸ್ಯ ಪಿ.ಕೆ ಥೋಮಸ್ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಮಂದಿರದ ಜೊತೆ ಕಾರ್ಯದರ್ಶಿ ಎಂ.ಗಣೇಶ್ ಕಾಮತ್ ಸನ್ಮಾನಪತ್ರ ವಾಚಿಸಿದರು. ಸಮಾಜಮಂದಿರ ಸಭಾದ ಉಪಾಧ್ಯಕ್ಷ ಎಸ್.ಡಿ ಸಂಪತ್ ಸಾಮ್ರಾಜ್ಯ ವಂದಿಸಿದರು.

-ಡಾ.ಎಲ್.ಸಿ ಸೋನ್ಸ್
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ

By Suddi9

Leave a Reply

Your email address will not be published. Required fields are marked *