ಬಂಟ್ವಾಳ: “ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎಂದು ಹಿರಿಯರು ಹೇಳುವ ಮಾತು ಶತ ಪ್ರತಿ ಶತ ಸತ್ಯ. ಮದುವೆ ಮಾಡುವುದು ಮತ್ತು ಮನೆ ಕಟ್ಟುವುದು ಎರಡೂ ಜೀವನದಲ್ಲಿ ಅಪಾರವಾದ ಅನುಭವವನ್ನು ತಂದುಕೊಡುವಂತಹ ವಿಷಯಗಳು. ಜೀವನವೇ ಒಂದು ಅಗ್ನಿಪರೀಕ್ಷೆಯಾದರೆ ಮನೆ ಕಟ್ಟುವುದು, ಮದುವೆ ಮಾಡುವುದು ಎರಡೂ ಆ ಪರೀಕ್ಷೆಯ ಫಲಿತಾಂಶಗಳಿದ್ದಂತೆ! ಮದುವೆಯು ಇಬ್ಬರು ಸೂಕ್ತ, ಸಮರಸದ ವ್ಯಕ್ತಿಗಳನ್ನು ಒಟ್ಟಿಗೆ ತರುವ ಪ್ರಕ್ರಿಯೆಯೇ ವಿವಾಹವೆನಿಸಿದೆ.
ದಾಂಪತ್ಯಕ್ಕೆ ಕಾಲಿಡುವ ನವಜೋಡಿಗೆ ನಮ್ಮ- ನಿಮ್ಮೆಲ್ಲರ ಆಶೀರ್ವಾದ ಎಷ್ಟು ಮುಖ್ಯವೋ, ಅದೇ ರೀತಿ ನಮ್ಮನ್ನು ಆತ್ಮೀಯದಿಂದ ಕರೆಯುವ ಕರೆಯೋಲೆಯ ಸಿಹಿ ಬರಹಗಳು ಅಷ್ಟೆ ಮುಖ್ಯವಾಗಿರುತ್ತದೆ. ಅಂತೆಯೇ ಬಿ. ಸಿ .ರೋಡಿನ ಯುವ ಛಾಯಾಗ್ರಾಹಕ , ಪತ್ರಕರ್ತ ಕಿಶೋರ್ ಪೆರಾಜೆಯವರು ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಲೇಖನಿ ಮಾದರಿಯಲ್ಲಿ ಮುದ್ರಿಸಿ, ತನ್ನ ಆತ್ಮೀಯರನ್ನು ಗಮನ ಸೆಳೆದಿದ್ದಾರೆ.

