ಬಂಟ್ವಾಳ: ಬಿ.ಸಿ.ರೋಡಿನ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಮಂಗಳವಾರ ದಿಢೀರ್ ನಾಗರ ಹಾವು ಕಾಣಿಸಿಕೊಂಡು ಇಲ್ಲಿನ ಸಿಬ್ಬಂದಿಗಳನ್ನು ಬೆಚ್ಚಿ ಬೀಳಿಸಿದೆ. ಕೆಲ ಹೊತ್ತುಗಳ ಕಾಲ ತೋಟಗಾರಿಕಾ ಇಲಾಖೆಯ ಕಚೇರಿಯೊಳಗೆ ಸುತ್ತಾಡಿ, ಕಡತಗಳಲ್ಲಿ ಹೊರಳಾಡಿ ಸಿಬ್ಬಂದಿಗಳ ಬೆವರಿಳಿಸಿದೆ!

havu-3

ಮುಂಬಾಗಿಲ ಮೂಲಕವೇ ಕಚೇರಿಯ ಒಳಪ್ರವೇಶಿಸಿದ ನಾಗರ ಹಾವು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಆಚಾರ್ಯ ಅವರು ಕುಳಿತುಕೊಳ್ಳುವ ಚೇಯರ್ ಅಡಿಭಾಗದಲ್ಲಿ ಸುತ್ತಾಡಿದೆ. ಅದಾಗಲೇ ನಾಗರ ಹಾವನ್ನು ಕಂಡು ಬೆಚ್ಚಿ ಬಿದ್ದ ಸಿಬ್ಬಂದಿಗಳು ಹೊರ ಓಡಿ ಬಂದು ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಸ್ಥಳಕ್ಕೆ ಬಂದ ಅವರು ಕ್ಷಣಾರ್ಧದಲ್ಲಿ ಹಾವನ್ನು ಸೆರೆ ಹಿಡಿದು ಚಾಕಲೇಟ್ ಡಬ್ಬದಲ್ಲಿ ಬಂಧಿಯಾಗಿಸಿದರು. ಡಬ್ಬದೊಳಗಿಂದಲೆ ಹೆಡೆ ಎತ್ತಿ ಬುಸುಗುಟ್ಟಿತ್ತಿದ್ದರೂ ಹಾವು ಕಂಡು ಆತಂಕಗೊಂಡಿದ್ದ ತೋಟಗಾರಿಕಾ ಇಲಾಖೆಯ ಸಿಬ್ಬಂದಿಗಳು ನಿರಾಳರಾದರು. ಬಳಿಕ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಅಧಿಕಾರಿಗಳ ನೆರವು ಪಡೆದು ಹಾವನ್ನು ವಗ್ಗದ ಕೊಡ್ಯಮಲೆ ಅರಣ್ಯಕ್ಕೆ ಬಿಟ್ಟರು.

havu

havu-2

ತೋಟಗಾರಿಕಾ ಇಲಾಖೆಯ ಹಿಂಭಾಗದಲ್ಲಿ ಶ್ರೀ ಅನ್ನಪೂಣೇಶ್ವರಿ ನಾಗದೇವರ ದೇವಸ್ಥಾನವಿದ್ದು ಅಲ್ಲಿನ ನಾಗರ ಬಂದಿರಬೇಕೆಂಬ ನಂಬಿಕೆ ಒಂದೆಡೆಯಾದರೆ, ತೋಟಗಾರಿಕಾ ಇಲಾಖೆಯಲ್ಲಿ ಇಲಿಗಳ ಕಾಟವಿದ್ದು ಅದನ್ನು ತಿನ್ನಲು ಹಾವು ಬಂದಿದೆ ಎನ್ನುವ ಮಾತುಗಳನ್ನು ಜನರಾಡಿಕೊಳ್ಳುತ್ತಿದ್ದರು. ಸ್ವಲ್ಪ ದಿನಗಳ ಹಿಂದೆಯಷ್ಟೇ ಇದೇ ಕಚೇರಿಯಲ್ಲಿ ನಾಗರ ಹಾವು ಕಾಣಿಸಿಕೊಂಡಿತ್ತು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *