ಬಂಟ್ವಾಳ: ಗ್ಯಾರೇಜು ಮಾಲಕರ ಸಂಘ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಅದು ನಿರಂತರವಾಗಿ ಮುಂದುವರಿಯಲಿ ಎಂದು ಮಂಗಳೂರಿನ ವೃತ್ತ ನಿರೀಕ್ಷಕ ಶಾಂತರಾಮ ಕುಂದರ್ ಹೇಳಿದರು.ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಹಾಗೂ ದ. ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯದ ಜಂಟಿ ಆಶ್ರಯದಲ್ಲಿ ಗಾಣದಪಡ್ಪುವಿನ ಅಟೋಲೈನ್ ಮಾರುತಿ ಸರ್ವಿಸ್ ಸೆಂಟರ್‍ನಲ್ಲಿ ನಡೆದ ಕಾನೂನು ಮಾಹಿತಿ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇದೇ ಸಂದರ್ಭ ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ವರ್ಜಿನಲ್ ಲೂಬ್ರಕೆಂಟ್ಸನ್ನು ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಮಾತನಾಡಿ ಸಮಾಜ ಸೇವೆಯೇ ಎಲ್ಲಾ ಸಂಘಟನೆಗಳ ಉದ್ದೇಶ. ಆ ನಿಟ್ಟಿನಲ್ಲಿ ಗ್ಯಾರೇಜು ಮಾಲಕರ ಸಂಘದ ಜೊತೆಗೂಡಿ ಲಯನ್ಸ್ ಕ್ಲಬ್ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದೆ ಎಂದರು. ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್ ಶಿಬಿರ ಉದ್ಘಾಟಿಸಿದರು. ನ್ಯಾಯವಾದಿ ನರೇಂದ್ರನಾಥ ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮೋಟಾರು ಕಾಯ್ದೆಯ ಬಗ್ಗೆ ಕಾನೂನು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಲಯನೆಸ್ ಕ್ಲಬ್ ಅಧ್ಯಕ್ಷೆ ದೇವಿಕಾ ದಾಮೋದರ್ ಭಾಗವಹಿಸಿದ್ದರು. ಕಾರ್ಯದರ್ಶಿ ಜಗದೀಶ ರೈ. ಕೋಶಾಧಿಕಾರಿ ವಿಶ್ವನಾಥ್ ಉಪಸ್ಥಿತರಿದ್ದರು. ಡಾ. ಗೀತ್‍ಪ್ರಕಾಶ್ ಅಂಗಾಗ ದಾನ ಹಾಗೂ ಡಯಾಬಿಟಿಸ್ ಬಗ್ಗೆ ಮಾಹಿತಿ ನೀಡಿದರು. ಸಂಘದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಸ್ವಾಗತಿಸಿ, ಉಮೇಶ್ ವಂದಿಸಿದರು, ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು.
