ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ತುಳು ಚಲನಚಿತ್ರ “ಪನೊಡ ಬೊಡ್ಚಾ” ನವೆಂಬರ್ 18 ಕ್ಕೆ ತೆರೆಯಲ್ಲಿ ಮೂಡಿಬರಲಿದೆ.
ಶಿವಧ್ವಜ್ ನಾಯಕ ಪಾತ್ರದಲ್ಲಿದ್ದು, ಶಕುಂತಳಾ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರ ರಂಗದ ವಿನಯ ಪ್ರಸಾದ್, ಹರೀಶ್ ರಾಯ್ ಪ್ರಥಮ ಬಾರಿ ತುಳುವಿಗೆ ಬಣ್ಣ ಹಚ್ಚಿದ್ದು ಉಳಿದಂತೆ ಕಿಶೋರ್ ಡಿ.ಶೆಟ್ಟಿ, ಸೀತಾ ಕೋಟೆ, ಇಳಾ ವಿಟ್ಲ, ಯೋಗೀಶ್ ಆಚಾರ್ಯ, ಚೇತನ್ ರೈ ಮಾಣಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸುಂದರ ರೈ ಮಂದಾರ, ಉಮೇಶ್ ಮಿಜಾರ್, ಸತೀಶ್ ಅಮೀನ್, ಚಂದ್ರಹಾಸ ಶೆಟ್ಟಿ ಮಾಣಿ, ರವಿ ಕುಮಾರ್ ಸುರತ್ಕಲ್, ದೀಪಕ್ ರೈ ಪಾಣಾಜೆ, ಪ್ರಕಾಶ್ ಕೂಮಿನಾಡು, ಗಿರೀಶ್ ಶೆಟ್ಟಿ, ರಶ್ಮಿಕಾ, ಅಭಿಲಾಷ, ಬಾಲಪ್ರತಿಭೆ ಬೇಬಿ ತೀರ್ಥ ಪೊಳಲಿ, ಬೇಬಿ ಹವ್ಯಾನಾರಯಣ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಶರಣ್ ಪಂಪ್ ವೆಲ್ ಮತ್ತು ರಮೇಶ್ ನಾಯಕ್ ರಾಯಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ತಾಲೂಕಿನ ಪ್ರಥಮ ಸಿನಿಬ್ಯಾನರ್ ಎಂಬ ಹೆಮ್ಮೆಯ ಈ ಪ್ರಥಮ ಚಿತ್ರ ತುಳು,ಚಿತ್ರರಂಗದ 75ನೇ ಚಿತ್ರವಾಗಿದೆ. ಶ್ರೀ ಕ್ಷೇತ್ರ ಕಾರಿಂಜದ ಶಿವಪಾರ್ವತಿ ಸನ್ನಿಧಿಯಲ್ಲಿ ಚಾಲನೆಗೊಂಡು ಮುತ್ತಪ್ಪ ರೈ ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್ನಲ್ಲಿ ಮತ್ತು ಬಂಟ್ವಾಳ, ಬಿ.ಸಿರೋಡ್ ಸುತ್ತಮುತ್ತ ಚಿತ್ರೀಕರಣ ನಡೆಸಿದೆ.


