ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಇಲ್ಲಿನ ನಿವಾಸಿ, ಪ್ಲಾಸ್ಟಿಕ್ ಸಾಮಾಗ್ರಿ ವ್ಯಾಪಾರಿ ಅಬೂಬಕ್ಕರ್ ಅವರು ತನ್ನ ಪತ್ನಿ, ಸಹೋದರನ ಪತ್ನಿ ಹಾಗೂ ಇವರ ಮಕ್ಕಳು ಸಹಿತ ಒಟ್ಟು ಎಂಟು ಮಂದಿ ಮನೆಯಲ್ಲಿ ಗುರುವಾರ ರಾತ್ರಿ ಎಂದಿನಂತೆ ಮಲಗಿದ್ದು, ಶುಕ್ರವಾರ ಮುಂಜಾನೆ ಎದ್ದು ನೋಡುವಾಗ ಮನೆಯಲ್ಲಿ ಕಳವು ನಡೆದಿರುವುದು ತಿಳಿದು ಬಂದಿದೆ. ಇವರ ಮನೆ ಮೇಲಿನ ಮಹಡಿ ಹಿಂಬಾಗಿಲಿನ ಮೂಲಕ ಒಳಪ್ರವೇಶಿಸಿದ್ದ ಕಳ್ಳರು ಮನೆ ಕೋಣೆಯೊಳಗೆ ತೆರೆದ ಕಪಾಟಿನಲ್ಲಿದ್ದ ರೂ 24ಪವನ್ ಚಿನ್ನಾಭರಣ ಮತ್ತು ರೂ 14ಸಾವಿರ ಮೊತ್ತದ ನಗದು ಸಹಿತ ಒಟ್ಟು ರೂ 6ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಎಸೈ ಸಂಜೀವ ಕೆ., ಅಪರಾಧ ವಿಭಾಗ ಎಸೈ ಗಂಗಾಧರಪ್ಪ ಮತ್ತಿತರರು ಶುಕ್ರವಾರ ಭೇಟಿ ನೀಡಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳ ತನಿಖೆ ನಡೆಸಿರುವುದಾಗಿ ತಿಳಿಸಿದ್ದಾರೆ.

