ಬಂಟ್ವಾಳ: ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಯಿಂದ ತುಂಬೆ ಅಣೆಕಟ್ಟೆ ಮೂಲಕ ಜಿಲ್ಲೆಯ ಮಹಾನಗರ ಪಾಲಿಕೆಗೆ ಕುಡಿಯುವ ನೀರು ಸಹಿತ ವಿವಿಧ ಕಂಪೆನಿಗಳಿಗೆ ನೀರು ಪೂರೈಸುತ್ತಿರುವ ಇಲ್ಲಿನ ನೇತ್ರಾವತಿ ನದಿಯಲ್ಲಿ ದಿನೇ ದಿನೇ ನೀರಿನ ಮಟ್ಟ ಇಳಿಮುಖವಾಗುತ್ತಿದ್ದು, ಮಂಗಳವಾರ ಸಂಜೆ ಸುರಿದ ದಿಢೀರ್ ಮಳೆಯಿಂದ ಬುಧವಾರ ಬೆಳಿಗ್ಗೆ ಕೊಂಚ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆ ಕಂಡು ಬಂದಿದೆ.

thumbe-1

ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹಾಹಾಕಾರ ಉಂಟಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನದಿಯಲ್ಲಿ ನೀರಿನ ಒಳ ಹರಿವು ಭಾರೀ ಇಳಿಮುಖವಾಗಿರುವುದು ಕಂಡು ಬಂದಿದೆ. ಇದರಿಂದಾಗಿ ಮಂಗಳೂರು ಮಹಾನ ನಗರ ಮತ್ತು ತಾಲ್ಲೂಕಿನ ಜನತೆ ಮತ್ತೆ ಕುಡಿಯುವ ನೀರಿನ ಬವಣೆ ಎದುರಾಗುವ ಬಗ್ಗೆ ಭೀತಿ ಎದುರಾಗಿದೆ.

ಇಲ್ಲಿನ 13 ಅಡಿ ಎತ್ತರದ ತುಂಬೆ ಅಣೆಕಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆ 6.10 ಅಡಿ ಇದ್ದ ನೀರಿನ ಮಟ್ಟದ ಸಂಜೆ ಸುರಿದ ದಿಢೀರ್ ಮಳೆಯಿಂದ ಬುಧವಾರ ಬೆಳಿಗ್ಗೆ 8ಅಡಿಗೆ ಏರಿಕೆ ಕಂಡಿದೆ.  ಇದರಿಂದಾಗಿ ನೇತ್ರಾವತಿ ನದಿಯುದ್ದಕ್ಕೂ ಹಲವೆಡೆ ಮರಳು ಎದ್ದು ಕಾಣಿಸಿಕೊಂಡಿದ್ದು, ಅಕ್ರಮ ಮರಳುಗಾರಿಕೆ ನೆಪದಲ್ಲಿ ನದಿಯಿಂದ ನಿಗದಿತ ಪ್ರಮಾಣದಲ್ಲಿ ಮರಳು ಹೊರ ತೆಗೆಯದಿದ್ದಲ್ಲಿ ನೀರು ಸಂಗ್ರಹಕ್ಕೂ ತೊಡಕಾಗಿ ಪರಿಣಮಿಸಲಿದೆ ಎಂದು ಸ್ಥಳೀಯ ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೇಟ್ ಅಳವಡಿಸಲು ಸಿದ್ಧತೆ:
ಅಣೆಕಟ್ಟೆಯಿಂದ ಮಳೆಗಾಲದಲ್ಲಿ ಹೊರತೆಗೆಯಲಾಗಿದ್ದ ಕಬ್ಬಿಣದ ಹಲಗೆಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದ್ದು, ಮುಂದಿನ ಎರಡು ದಿನಗಳೊಳಗೆ ಮತ್ತೆ ಅಣೆಕಟ್ಟೆಗೆ ಹಲಗೆ ಅಳವಡಿಸುವ ಮೂಲಕ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನದಿಯಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗಿದ್ದು, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ತ್ತೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಕೊರತೆ ಎದುರಾಗಲಿದೆ. ಈಗಾಗಲೇ ಹೊಸ ಅಣೆಕಟ್ಟೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ನೂರಾರು ಎಕರೆ ಕೃಷಿಭೂಮಿ ಮುಳುಗಡೆ ಭೀತಿ ಎದುರಿಸುತ್ತಿರುವ ಸಂತ್ರಸ್ತರಿಗೆ ಕಿಂಚಿತ್ತೂ ಪರಿಹಾರಧನ ವಿತರಿಸಿಲ್ಲ. ಈ ಸಾಕಷ್ಟು ಬಾರಿ ರಹಸ್ಯವಾಗಿ ಮತ್ತು ಬಹಿರಂಗ ಸವರ್ೆ ಕಾರ್ಯ ನಡೆಸಲಾಗಿದ್ದರೂ ಅದು ಕೂಡಾ ಪೂರ್ಣಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಟ್ಟು ಏಳು ಮೀಟರ್ ಎತ್ತರದ ಹೊಸ ಅಣೆಕಟ್ಟೆಯಲ್ಲಿ ಸದ್ಯ ಐದು ಮೀಟರ್ ಮಾತ್ರ ನೀರು ಸಂಹ್ರಹ ಮಾಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದರೂ ಇದುವರೆಗೆ ಪರೀಕ್ಷಾ ಸಂಗ್ರಹವೂ ನಡೆದಿಲ್ಲ. ಈ ನಡುವೆ ವಿವಿಧ ಖಾಸಗಿ ಕಂಪೆನಿಗಳು ಎಗ್ಗಿಲ್ಲದೆ ನೀರು ಮೇಲೆತ್ತುತ್ತಿದ್ದರೆ, ಇನ್ನೂ ಕೆಲವೆಡೆ ವ್ಯಾಪಕವಾಗಿ ನೀರು ಪೋಲಾಗುತ್ತಿರುವ ಬಗ್ಗೆಯೂ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಮತ್ತು ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಬೇಸಿಗೆಯಲ್ಲಿ ನೀರಿನ ಬವಣೆ ಮಾತ್ರ ಎದುರಿಸುವುದು ಅನಿವಾರ್ಯವಾಗಿದೆ ಎಂಬ ಅಳಲು ಕೇಳಿ ಬಂದಿದೆ.

By Suddi9

Leave a Reply

Your email address will not be published. Required fields are marked *