ಬಂಟ್ವಾಳ: ಅಕ್ರಮ ಮರಳುಗಾರಿಕೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು ಅನುಸರಿಸುತ್ತಿರುವ ನೀತಿಯನ್ನು ಗಮನಿಸಿದರೆ ಜಿಲ್ಲೆಯ ಸಣ್ಣ ಮರಳು ವ್ಯಾಪಾರಿಗಳಿಗೊಂದು ಕಾನೂನು, ಬೃಹತ್ ವ್ಯಾಪಾರಿಗಳಿಗೆ ಇನ್ನೊಂದು ಕಾನೂನು ಇದೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇನ್ನು ಮರಳು ದಂಧೆಕೋರರಾದ ಪ್ರಭಾವಿ ರಾಜಕಾರಣಿಗಳು ಹಾಗೂ ವ್ಯಕ್ತಿಗಳಿಗೆ ಯಾವ ಕಾನೂನೂ ಅನ್ವಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಮುಂದಿನ ಆದೇಶದವರೆಗೆ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸುವುದು, ಸಾಗಾಟ ಮಾಡುವುದನ್ನು ನಿರ್ಬಂಧಿಸಿ ಜಿಲ್ಲಾಡಳಿತ ಕೆಲವು ತಿಂಗಳ ಹಿಂದೆ ಆದೇಶ ಹೊರಡಿಸಿದೆ. ಜಿಲ್ಲಾಡಳಿತದ ಆದೇಶದ ನಡುವೆಯೂ ಜಿಲ್ಲೆಯ ಜೀವ ನದಿಯಾದ ನೇತ್ರಾವತಿ, ಫಲ್ಗುಣಿ ಸಹಿತ ಇತರ ನದಿಗಳ ಪಾತ್ರದಲ್ಲಿ ಕಾನೂನಿನ ಭಯವೇ ಇಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಆದರೆ ಜಿಲ್ಲಾಡಳಿತ, ಭೂ ಮತ್ತು ಗಣಿ ಅಧಿಕಾರಿಗಳು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಮರಳು ಮಾಫಿಯಾದೊಂದಿಗೆ ಜಿಲ್ಲೆ, ತಾಲೂಕಿನ ಕಂದಾಯ, ಭೂ-ಗಣಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂಬುದಕ್ಕೆ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಇನ್ನು ಮರಳುಗಾರಿಕೆಗೆ ಅವಕಾಶವಿದ್ದರೂ ಮಾನವ ಶ್ರಮದಿಂದಲೇ ನದಿಯಿಂದ ಮರಳು ಎತ್ತಬೇಕು. ಯಂತ್ರಗಳ ಮೂಲಕ ಮರಳುಗಾರಿಕೆ ನಡೆಸುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ ಜಿಲ್ಲೆಯ ಬೃಹತ್ ಮರಳು ಮಾಫಿಯಾದ ಪ್ರಭಾವಿ ರಾಜಕಾರಣಿಗಳು, ವ್ಯಕ್ತಿಗಳಿಗೆ ಈ ಕಾನೂನು ಅನ್ವಯಿಸುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಜಿಲ್ಲೆಯ ನೇತ್ರಾವತಿ, ಫಲ್ಗುಣಿ ನದಿ ತೀರದಲ್ಲಿ ಜೆಸಿಬಿ, ಹಿಟಚಿ, ಕ್ರೇನ್, ಹೂಳೆತ್ತುವ ಯಂತ್ರಗಳಿಂದ ನದಿಯಿಂದ ಮರಳು ಎತ್ತಲಾಗುತ್ತಿದೆ. ಇವುಗಳ ಬಗ್ಗೆ ಜಿಲ್ಲಾಡಳಿತ, ಕಂದಾಯ, ಭೂ-ಗಣಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇದ್ದರೂ ದಾಳಿ ಕಾರ್ಯಾಚರಣೆ ನಡೆಸಲು ಅವರು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಬಹುತೇಕ ಅಕ್ರಮ ಮರಳುಗಾರಿಕೆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಿಂದ ಮತ್ತು ರಾಜಕೀಯ ಪಕ್ಷಗಳಿಗೆ ಡೊನೇಷನ್ ನೀಡುವ ವ್ಯಕ್ತಿಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೂ ಧೈರ್ಯ ಸಾಕಾಗುತ್ತಿಲ್ಲ.
ತಾರತಮ್ಯ ನೀತಿ: ಬೃಹತ್ ಪ್ರಮಾಣದಲ್ಲಿ ಮರಳುಗಾರಿಕೆ ನಡೆಸುವ ಪ್ರಭಾವಿ ರಾಜಕಾರಣಿಗಳು, ವ್ಯಕ್ತಿಗಳ ಮರಳು ದಕ್ಕೆ, ದಾಸ್ತಾನುಗಳಿಗೆ ದಾಳಿ ನಡೆಸಲು ಜಿಲ್ಲಾ, ತಾಲೂಕು ಕಂದಾಯ, ಭೂ-ಗಣಿ ಹಾಗೂ ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಆದರೆ ಸಣ್ಣ ಮರಳು ವ್ಯಾಪಾರಿಗಳ ದಕ್ಕೆಗಳಿಗೆ ದಾಳಿ ನಡೆಸುತ್ತಿದ್ದಾರೆ. ಅಲ್ಲಿ ದಾಸ್ತಾನಿರಿಸಿದ ಮರಳು ವಶಕ್ಕೆ ಪಡೆದು ಸೊತ್ತುಗಳನ್ನು ಮುಟ್ಟುಗೋಲು ಹಾಕುತ್ತಾರೆ. ಅಲ್ಲದೆ ಕೇಸ್ ದಾಖಲಿಸಿ ಕಾನೂನು ಕ್ರಮ ಜರಗಿಸುತ್ತಾರೆ. ಬಡವನೊಬ್ಬ ಮನೆ ನಿರ್ಮಾಣಕ್ಕೆಂದು ಒಂದು ಲಾರಿ ಮರಳು ಸಾಗಿಸಿದರೆ ಅಥವಾ ಮನೆ ಮುಂದೆ ಸಂಗ್ರಹ ಮಾಡಿದ್ದರೆ ಅಧಿಕಾರಿಗಳು ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆದು ಮನೆ ಯಜಮಾನನ ಮೇಲೆ ಕೇಸ್ ಜಡಿಯುತ್ತಾರೆ. ಬೃಹತ್ ಮರಳು ವ್ಯಾಪಾರಿಗಳಿಗೊಂದು ಕಾನೂನು, ಸಣ್ಣ ವ್ಯಾಪಾರಿಗಳಿಗೆ ಹಾಗೂ ಬಡವರಿಗೆ ಇನ್ನೊಂದು ಕಾನೂನಿನಂತೆ ಜಿಲ್ಲೆಯ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂಬುದು ಸಣ್ಣ ಮರಳು ವ್ಯಾಪಾರಿಗಳೇ ಆರೋಪಿಸುತ್ತಾರೆ.
ಮರಳು ಮಾಫಿಯಾದ ವಿರುದ್ಧ ಏಕ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಬಡವರ, ಸಣ್ಣ ವ್ಯಾಪಾರಿಗಳ ಹಾಗೂ ಬೃಹತ್ ಮಾಫಿಯಾದ ನಡುವೆ ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು. ಜಿಲ್ಲೆಯಲ್ಲಿ ಒಂದೋ ಮರಳುಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಯಾವುದೇ ವ್ಯಕ್ತಿ ಕೂಡಾ ನದಿಯಿಂದ ಮರಳು ಎತ್ತದಂತೆ, ಸಾಗಾಟ ಮಾಡದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಎಲ್ಲರಿಗೂ ಮರಳುಗಾರಿಕೆ ನಡೆಸಲು ಮುಕ್ತ ಅವಕಾಶ ನೀಡಬೇಕು. ಇದರ ಹೊರೆತು ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಅನ್ಯಾಯ ಮಾಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು ಎಂಬುದು ಪ್ರಜ್ಞಾವಂತ ಜನರ ಆಗ್ರಹವಾಗಿದೆ.
ಮರಳು ಪತ್ತೆಗೆ ಮುಲ್ಲರಪಟ್ಣದವರೆಗೆ ಹೋಗಬೇಕೆ?
ಮುಲ್ಲರಪಟ್ಣ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬುಧವಾರ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆಯ ಬಳಿಕ ಮರಳು ಮಾಫಿಯಾದೊಂದಿಗೆ ಪೊಲೀಸರು ಹಾಗೂ ಅಧಿಕಾರಿಗಳು ಅನುಸರಿಸುತ್ತಿರುವ ತಾರತಮ್ಯ ನೀತಿಯ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಪೊಲೀಸರಿಗೆ ಅಕ್ರಮ ಮರಳುಗಾರಿಕೆ ಪತ್ತೆ ಹಚ್ಚಲು ಮುಲ್ಲರಪಟ್ಣದ ಮೂಲೆ ವರೆಗೆ ಹೋಗಬೇಕಿಲ್ಲ. ನೈತಿಕತೆಯಿಂದ ಕಾರ್ಯಾಚರಣೆ ನಡೆಸುವ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿದರೆ 50ಕ್ಕೂ ಹಚ್ಚು ಮರಳು ಲಾರಿಗಳನ್ನು ವಶಕ್ಕೆ ಪಡೆಯಬಹುದಾಗಿದೆ. ಇನ್ನು ಪೊಲೀಸ್ ಠಾಣೆಯ ಮೀಟರ್ ಅಂತರದಲ್ಲಿ ಯಂತ್ರಗಳ ಸಹಾಯದಿಂದ ನಡೆಯುತ್ತಿರುವ ಅದೆಷ್ಟೋ ಬೃಹತ್ ಅಕ್ರಮ ಮರಳು ದಕ್ಕೆಗಳಿವೆ. ಅವುಗಳ ವಿರುದ್ಧ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸಣ್ಣ ಪುಟ್ಟ ಮರಳು ವ್ಯಾಪಾರಿಗಳ ದಕ್ಕೆಗಳಿಗೆ ಮಾತ್ರ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಇದರ ಹಿಂದೆ ಬೃಹತ್ ಮರಳು ಮಾಫಿಯಾದ ಕೈವಾಡವೂ ಇದೆ ಎಂದು ಹೇಳುತ್ತಾರೆ ಬಂಟ್ವಾಳ ಜೆಡಿಎಸ್ ಮುಖಂಡ ಹಾರೂರ್ ರಶೀದ್.

