ಬಂಟ್ವಾಳ: ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್‍ರಿಂದ ಗುತ್ತಿಗೆದಾರ, ಮುಖ್ಯಾಧಿಕಾರಿ, ಸದಸ್ಯರ ಸಭೆ. ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಪತ್ರಕರ್ತರ ಸಂವಾದ. ಸಲಹೆಗಾಗಿ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಭೆಗಳು. ಜಾಗೃತಿ ಕಾರ್ಯಕ್ರಮ. ಸರ್ವ ಸದಸ್ಯರ ವಿಶೇಷ ಸಭೆಗಳು. ವಾರಕ್ಕೊಮ್ಮೆ ಸ್ವಚ್ಛತಾ ಕಾರ್ಯಕ್ರಮ. ಸಾವಿರಾರು ಬಕೆಟ್‍ಗಳ ವಿತರಣೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಜೆಸಿಬಿ, ಟಿಪ್ಪರ್, ಟಾಟಾ ಏಸ್ ಸಹಿತ ವಿವಿಧ ಯಂತ್ರೋಪಕರಣಗಳ ಖರೀದಿ.

ಇವೆಲ್ಲಾ ಏನಪ್ಪಾ ಎಂದು ಯೋಚಿಸಿ ತಲೆಕೆಡಿಸಿಕೊಳ್ಳಬೇಡಿ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕ ಘನತ್ಯಾಜ್ಯ ವಿಲೇವಾರಿಗಾಗಿ ಪುರಸಭೆ ಆಡಳಿತ ನಡೆಸಿರುವ ಕೆಲವೊಂದು ಪ್ರಯತ್ನಗಳು ಇದು. ಆದರೆ ಇಷ್ಟೆಲ್ಲ ಸಭೆ, ಸಂವಾದ, ಕಾರ್ಯಕ್ರಮ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಇಲ್ಲಿನ ಘನತ್ಯಾಜ್ಯ ವಿಲೇವಾರಿ ಮಾತ್ರ ಸಮರ್ಪಕವಾಗಿ ನಡೆಯದೆ ಸಮಸ್ಯೆಯಾಗಿಯೇ ಉಳಿದಿದೆ.

23 ವಾರ್ಡ್‍ಗಳನ್ನು ಹೊಂದಿರುವ ಬಂಟ್ವಾಳ ಪುರಸಭೆಯಲ್ಲಿ ಕಸದ್ದೆ ಸಮಸ್ಯೆ. ಅಸಮರ್ಪಕ ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಪುರಸಭಾ ನಿವಾಸಿಗಳಿಂದ ದೂರಿನ ಮೇಲೆ ದೂರುಗಳು ಕೇಳಿ ಬರುತ್ತಿವೆ. ಕಸ ವಿಲೇವಾರಿಗೆ ಸಂಬಂಧಿಸಿ ಪಕ್ಷ ಭೇದ ಮರೆತು ಸರ್ವ ಸದಸ್ಯರು ಗುತ್ತಿಗೆದಾರನ ವಿರುದ್ಧ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸದ ಸಾಮಾನ್ಯ ಸಭೆಗಳೇ ಇಲ್ಲ. ಅಸಮರ್ಪಕ ಘನತ್ಯಾಜ್ಯ ವಿಲೇವಾರಿ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿರುವುದರಿಂದ ಪುರಸಭೆ ಸಾಮಾನ್ಯ ಸಭೆಯ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ. ಇದರಿಂದಾಗಿ ಉಳಿದ ಅಭಿವೃದ್ಧಿ ಕೆಲಸಗಳೂ ಕುಂಠಿತಗೊಳ್ಳುತ್ತಿವೆ.

ಸಮರ್ಪಕ ಘನತ್ಯಾಜ್ಯ ವಿಲೇವಾರಿಯಲ್ಲಿ ಈ ಹಿಂದಿನ ಗುತ್ತಿಗೆದಾರ ವಿಫಲವಾಗಿದ್ದರಿಂದ ವರ್ಷದ ಹಿಂದೆ ಗುತ್ತಿಗೆದಾರ ಎಮ್ಮೆಕೆರೆ ಸಲಾಂಗೆ ಘನತ್ಯಾಜ್ಯ ವಿಲೇವಾರಿಯ ಗುತ್ತಿಗೆ ನೀಡಲಾಗಿದೆ. ಘನತ್ಯಾಜ್ಯ ವಿಲೇವಾರಿಗೆ ಮಾಸಿಕ 3.10 ಲಕ್ಷ ರೂಪಾಯಿ ಟೆಂಡರ್ ನೀಡಲಾದೆ. ಅಲ್ಲದೆ ‘ನಿರ್ಮಲ ಬಂಟ್ವಾಳ’ ಯೋಜನೆಯಡಿ ಪುರಸಭೆಗೆ 1 ಜೆಸಿಬಿ, 1 ಟಿಪ್ಪರ್ ಲಾರಿ, 3 ಟಾಟಾ ಏಸ್, 6 ಹುಲ್ಲು ಕತ್ತರಿಸುವ ಯಂತ್ರಗಳು ಸಹಿತ ವಿವಿಧ ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ. ಇವೆಲ್ಲವನ್ನೂ ಘನತ್ಯಾಜ್ಯ ವಿಲೇವಾರಿಗಾಗಿಯೇ ಬಳಸಲಾಗುತ್ತಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ.

ಮನೆ ಮನೆ ಕಸ ಸಂಗ್ರಹಿಸಲು ಪ್ರತಿ ಮನೆಗೆ ಮಾಸಿಕ 30 ರೂಪಾಯಿ ಪುರಸಭೆ ನಿಗದಿಪಡಿಸಿದೆ. ಆದರೆ ಕಸ ಸಂಗ್ರಹಿಸುವವರು 50 ರೂಪಾಯಿ ವಸೂಲಿ ಮಾಡುತ್ತಾರೆ ಎಂಬುದು ಸದಸ್ಯರು, ಪುರಸಭೆ ನಿವಾಸಿಗಳ ಆರೋಪ. 50 ರೂಪಾಯಿ ನೀಡಿದರೂ ಪರವಾಗಿಲ್ಲ ಕಸ ವಿಲೇವಾರಿ ಮಾತ್ರ ಸರಿಯಾಗಿ ನಡೆಯಲಿ ಎಂದರೆ ಕಸ ಸಂಗ್ರಹಿಸುವ ವಾಹನ ಸರಿಯಾಗಿ ಬರುತ್ತಿಲ್ಲ ಎಂಬುದು ಕೆಲವರ ಆರೋಪ. ‘ನಿರ್ಮಲ ಬಂಟ್ವಾಳ’ ಯೋಜನೆಯಡಿ ಪುರಸಭೆ ವ್ಯಾಪ್ತಿಯಲ್ಲಿ ಸಾವಿರಾರು ಬಕೆಟ್‍ಗಳನ್ನು ವಿತರಿಸಲಾಗಿದೆ. ಮೂಲದಲ್ಲೇ ಹಸಿ ಕಸ, ಒಣ ಕಸ ವಿಂಗಡಿಸಿ ಬರುವಂತಾಗಲು ತಲಾ ಒಂದು ಮನೆಗೆ ಎರಡೆರಡು ಬಕೆಟ್‍ಗಳನ್ನು ನೀಡಲಾಗಿದೆ. ಆದರೆ ಬಕೇಟ್‍ನಲ್ಲಿ ಕಸ ಹಿಡಿದು ರಸ್ತೆಬದಿ ಎಷ್ಟು ಹೊತ್ತು ಕಾದರೂ ಕಸ ಸಂಗ್ರಹಕರು ಮಾತ್ರ ಬರುತ್ತಿಲ್ಲ ಎನ್ನುವುದು ಇನ್ನು ಕೆಲವರ ಆರೋಪ.

ಒಟ್ಟಿನಲ್ಲಿ ವರ್ಷಗಳಿಂದ ಕಸದ ಸಮಸ್ಯೆಯಲ್ಲಿ ಮುಳುಗಿರುವ ಬಂಟ್ವಾಳ ಪುರಸಭೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬೇಕಿದೆ. ಇರುವ ಸೌಲಭ್ಯಗಳನ್ನು ಉಪಯೋಗಿಸಿ ಜಿಲ್ಲೆಯಲ್ಲೇ ಸ್ವಚ್ಛ ಪುರಸಭೆಯಾಗಿ ಗುರುತಿಸುವಂತಾಗಳು ಪುರಸಭಾ ಸದಸ್ಯರು, ಗುತ್ತಿಗೆದಾರ, ಅಧಿಕಾರಿಗಳು ಶ್ರಮಿಸಬೇಕಿದೆ.

ಪ್ರಯೋಜನವಾಗದ ಸಭೆ, ಸಲಹೆಗಳು:
ಪುರಸಭೆಯಿಂದ ಮಾಸಿಕ ಲಕ್ಷಾಂತರ ರೂಪಾಯಿ ಪಾವತಿಸುತ್ತಿದ್ದರೂ, ಕೋಟ್ಯಂತರ ರೂಪಾಯಿಯ ವಾಹನ, ಯಂತ್ರೋಪಕರಣ ಖರೀಸಿದ್ದರೂ ಘನತ್ಯಾಜ್ಯ ಮಾತ್ರ ಸಮರ್ಪಕವಾಗಿ ವಿಲೇವಾರಿಯಾಗದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯೊಂದರಲ್ಲಿ ಸದಸ್ಯರ ಒತ್ತಾಯದಂತೆ ಗುತ್ತಿಗೆದಾರನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ನಿರ್ಣಯ ಮಾಡಲಾಗಿತ್ತು. ಇದರ ಪರಿಣಾಮ ಮಂಗಳೂರು ಸಹಾಯಕ ಕಮಿಷನರ್ ಡಾ. ಅಶೋಕ್ ಗುತ್ತಿಗೆದಾರ, ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ, ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಸದಸ್ಯರ ವಿಶೇಷ ಸಭೆ ನಡೆಸಿದ್ದರು. ಸದಸ್ಯರಿಂದ ಸಮಸ್ಯೆಯನ್ನು ಆಳಿಸಿದ ಡಾ. ಅಶೋಕ್, ಸಮರ್ಪಕ ಘನ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆದಾರ ಮತ್ತು ಮುಖ್ಯಾಧಿಕಾರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದ್ದರು.

ಅಲ್ಲದೆ ತ್ಯಾಜ್ಯ ವಿಲೇವಾರಿ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿ ಇಲ್ಲಿನ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಭೆಗಳನ್ನೂ ನಡೆಸಿತ್ತು. ಈ ಸಭೆಗಳಲ್ಲೂ ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಲವಾರು ಸಲಹೆಗಳನ್ನು ನೀಡಿದ್ದರು. ಆದರೆ ಅವೆಲ್ಲವೂ ಬರೇ ಸಭೆಗೆ ಸೀಮಿತವಾಗಿದೆಯೇ ಹೊರೆತು ಒಂದೇ ಒಂದು ಸಲಹೆಯನ್ನು ಅನುಷ್ಠಾನಕ್ಕೆ ತರುವಳ್ಳಿ ಪುರಸಭೆ ಸಂಪೂರ್ಣವಾಗಿ ವಿಫಲವಾಗಿದೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡ್, ಕೈಕಂಬ, ಬಂಟ್ವಾಳ, ಮೆಲ್ಕಾರ್ ಸಹಿತ ಪ್ರಮುಖ ವ್ಯವಹಾರ ಕೇಂದ್ರಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ. ಪುರಸಭೆಯ ಕೆಲವು ವಾರ್ಡ್‍ಗಳಲ್ಲಿ ಕಿರಿದಾದ ಹಾಗೂ ಅಸಮಪರ್ಕ ರಸ್ತೆಗಳಿಂದಾಗಿ ಆ ಭಾಗದ ಮನೆ ಮನೆಗೆ ಕಸ ಸಂಗ್ರಹದ ವಾಹನಗಳು ಸಂಚಾರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿನ ಘನತ್ಯಾಜ್ಯ ವಿಲೇವಾರಿಯ ಸಮಸ್ಯೆ ಪುರಸಭೆ ವ್ಯಾಪ್ತಿಯಲ್ಲಿದೆ. ಈ ಸಮಸ್ಯೆಯನ್ನು ನಿವಾರಿಸಲು ತನ್ನ ಅವಧಿಯಲ್ಲೇ ಯೋಜನೆಯೊಂದನ್ನು ರೂಪಿಸಲಾಗುವುದು.

– ರಾಮಕೃಷ್ಣ ಆಳ್ವ, ಪುರಸಭಾಧ್ಯಕ್ಷ

By suddi9

Leave a Reply

Your email address will not be published. Required fields are marked *