ಕೈಕಂಬ: ಮಧುಮೇಹ ತಡೆಗಟ್ಟುವ ಕುರಿತು ಎಲ್ಲಾ ಗ್ರಾಮ ಹಾಗೂ ತಾಲೂಕು ಪಂಚಾಯತ್‍ಗಳಲ್ಲಿ ನಿರ್ಣಯ ಮಂಡನೆ ಆಗಬೇಕಾದ ಅನಿವಾರ್ಯತೆಯಿದೆ. ಜನಸಾಮಾನ್ಯರ ಸಹಕಾರದಲ್ಲಿ ಭಾರತವು ಮಧುಮೇಹದಿಂದ ಮುಕ್ತವಾಗಬಹುದು ಎಂದು ವಾರ್ತಾ.ಕಾಮ್ ಪ್ರಧಾನ ಸಂಪಾದಕ ಹರೀಶ್ ಅದ್ದೂರು ಹೇಳಿದರು.

ಅವರು ಗಂಜಿಮಠ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯಲ್ಲಿ ಜರಗಿದ ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಅಂಗವಾಗಿ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ವತಿಯಿಂದ “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ”ವನ್ನು ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿದರು.

ಡಾ|ಸತೀಶ್ ಶಂಕರ್ ಬಿ. ಮಧುಮೇಹದ ಬಗ್ಗೆ ಆಯುರ್ವೇದ ಶಾಸ್ತ್ರದಲ್ಲಿ 20 ವಿಧ ಪ್ರಮೇಹ ರೋಗಗಳನ್ನು ತಿಳಿಸಿದ್ದು ಅವುಗಳಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಆಗದಿದ್ದಲ್ಲಿ ಅದು ಕಾಲಾಂತರದಲ್ಲಿ ಮಧುಮೇಹವಾಗಿ ಪರಿವರ್ತನೆಗೊಳ್ಳತ್ತದೆ. ಮಧುಮೇಹದಲ್ಲಿ ರಕ್ತ ಹಾಗೂ ಮೂತ್ರದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿ ಕಂಡುಬರುತ್ತದೆ.
ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿರುವಂತೆ ಆರೋಗ್ಯಪೂರ್ಣ ಜೀವನ ಶೈಲಿಗಾಗಿ ತಿಳಿಸಿರುವ ನಿಯಮಬದ್ಧವಾದ ದೈನಂದಿನ ಚಟುವಟಿಕೆಗಳು, ಹಿತಮಿತವಾದ ಆಹಾರ ವಿಹಾರ, ಅನಗತ್ಯ ಔಷಧಿ ಸೇವನೆಗಳಿಂದ ದೂರವಿದ್ದು ನಿತ್ಯ ಜೀವನದಲ್ಲಿ ನಿಯಂತ್ರಣ ಸಾಧಿಸಿದಾಗ ಮಧುಮೇಹ ನಿಯಂತ್ರಣ ಸಾಧ್ಯ ಎಂದು ಮಧುಮೇಹದ ಬಗ್ಗೆ ಮಾಹಿತಿ ನೀಡಿದರು.
ನಾರ್ಲಪದವಿನ ಅರ್ಚಕರಾದ ಶ್ರೀಪತಿ ಭಟ್, ಆಯುರ್ ಸ್ಪರ್ಶ ಆಯುರ್ವೆದ ಆಸ್ಪತ್ರೆಯ ಸಂಸ್ಥಾಪಕ ನಾರಾಯಣ ಭಟ್, ಗಂಜಿಮಠ ಗ್ರಾ.ಪಂ ಅಧ್ಯಕ್ಷೆ ಮಾಲತಿ, ತಾ.ಪಂ ಸದಸ್ಯ ಪೂರ್ಣಿಮಾ ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ಸೌಜನ್ಯ ಸತೀಶ್ ವಂದಿಸಿದರು. ಡಾ|ಸತೀಶ್ ಶಂಕರ್ ಬಿ. ಕಾರ್ಯಕ್ರಮ ನಿರೂಪಿಸಿದರು.
