ಮೂಡುಬಿದಿರೆ: ಈಶಾನ್ಯ ಭಾರತದ ಯುವಸಮೂಹದಲ್ಲಿ ಅಗಾಧದ ಸಾಮರ್ಥ್ಯವಿದೆ. ಈಶಾನ್ಯ ಭಾರತವು ಜೈವಿಕ ವೈವಿಧ್ಯತೆಯ ಆಗರವಾಗಿದ್ದು,ಅದನ್ನು ಉಳಿಸಿಕೊಂಡು ಅನಿವಾರ್ಯವಾಗಿರುವ ಆಧುನಿಕತೆಗೆ ತೆರೆದುಕೊಳ್ಳಬೇಕು ಎಂದು ಗೌಹಾಟಿ ವಿ.ವಿ ಉಪಕುಲಪತಿ ಡಾ.ಮೃದುಲ್ ಹಜಾರಿಕಾ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಮ್ ಕ್ಲಬ್‍ನ ಆಶ್ರಯದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ `ಈಶಾನ್ಯ ಭಾರತದ ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಯುವಜನತೆ ತಕ್ಷಣದ ಪರಿಹಾರಕ್ಕೆ ಹಾತೊರೆಯುತ್ತದೆ. ಮಾಹಿತಿ ಎಂದಿಗೂ ಜ್ಞಾನವಾಗುವುದಿಲ್ಲ ತಿಳುವಳಿಕೆಯಿಂದ ಕೂಡಿದ ಮಾಹಿತಿ ಜ್ಞಾನವಾಗುತ್ತದೆ. ನಾವು ಎತ್ತರಕ್ಕೆ ಏರಿದಾಗ ಮಾತ್ರ ಇತರರನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಅಸಹಿಷ್ಣುಗಳಾಗದೇ ಪ್ರಗತಿಯಲ್ಲಿ ಒಟ್ಟುಗೂಡಿ ಬೆಳೆಯೋಣ ಎಂದರು. ಅನ್ವಯಿಕ ವಿಜ್ಞಾನ ವಿಭಾಗದ ಸಾಹಾಯಕ ಪ್ರಾಧ್ಯಾಪಕಿ ಡಾ.ದೇಬಾಂಜನಿ ಬಸುಮತರಿ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಬರ್ನಾಲಿ ಸರ್ಮಾ ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸ್ವಾಗತಿಸಿದರು. ಸಿಲಿಕಿ ವಂದಿಸಿದರು.
ಅಧ್ಯಯನ ಪ್ರವಾಸ:
ಡಾ. ಮೃದುಲ್ ಹಝಾರಿಕಾ ತಮ್ಮ ಸಹೋದ್ಯೋಗಿಗಳೊಂದಿಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳಿಗೆ ಅಧ್ಯಯನ ಪ್ರವಾಸಕ್ಕೆ ಬಂದಿದ್ದು, ವೈವಿಧ್ಯತೆಯ ಶಿಕ್ಷಣಕ್ಕೆ ಹೆಸರಾಗಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂಲಕ ಈಶಾನ್ಯ ರಾಜ್ಯಗಳ ಜತೆಗೆ ಉತ್ತಮ ಶೈಕ್ಷಣಿಕ ಬಾಂಧವ್ಯವೊಂದನ್ನು ಬೆಸೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

