ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸುರಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ‘ವಿಶ್ವ ಕೈ ತೊಳೆಯುವ ದಿನಾಚರಣೆ’ ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉದ್ಘಾಟಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಶುಚಿತ್ವದ ಕಡೆಗೆ ಹೆಚ್ಚಿನ ಒಲವು ಮತ್ತು ಕಾಳಜಿ ವ್ಯಕ್ತಪಡಿಸಿದಾಗ ಶೇ.30ರಷ್ಟು ವಿವಿಧ ಬಗೆಯ ರೋಗ ರುಜಿನಗಳನ್ನು ತಡೆಗಟ್ಟಲು ಸಾಧ್ಯವಿದೆ. ಈ ಬಗ್ಗೆ ಜನತೆಗೆ ಮನದಟ್ಟು ಮಾಡುವುದಕ್ಕಾಗಿ ಪ್ರತೀ ವರ್ಷ ಅ.15ರಂದು ‘ವಿಶ್ವ ಕೈತೊಳೆಯುವ ದಿನಾಚರಣೆ’ ಆಚರಿಸಲಾಗುತ್ತಿದೆ. ಇದೀಗ ನವರಾತ್ರಿ ರಜೆ ಹಿನ್ನೆಲೆಯಲ್ಲಿ ನಿಗದಿತ ದಿನಕ್ಕಿಂತ ಮುಂಚಿತವಾಗಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದ್ದಾರೆ. ತಾಲ್ಲೂಕಿನ ಸುರಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ‘ವಿಶ್ವ ಕೈ ತೊಳೆಯುವ ದಿನಾಚರಣೆ’ ತಾಲ್ಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಎಸ್. ಮಹಮ್ಮದ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಾಲಾ ಮಟ್ಟದಿಂದಲೇ ಕೈಬಾಯಿ ಸ್ವಚ್ಚ ಇಟ್ಟುಕೊಳ್ಳುವ ಶಿಸ್ತು ಬೆಳೆದು ಬರಬೇಕು ಎಂದರು.
ಶಾಲಾಭಿವೃದ್ದಿ ಸಮಿತಿ ಗೌರವಾಧ್ಯಕ್ಷ ಎಸ್.ಎಂ. ಅಬೂಬಕ್ಕರ್ ಮಾತನಾಡಿ, ಇಲ್ಲಿನ ಕೈತೋಟ ಮತ್ತು ಮಳೆಕೊಯ್ಲು ಯೋಜನೆಯು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಇದರಿಂದಾಗಿ ಇಲ್ಲಿನ ಸುಮಾರು 32 ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್ ಆರ್. ಮತ್ತಿತರರು ಶುಭ ಹಾರೈಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣ ಶೆಟ್ಟಿ, ಮಂಜುಳಾ, ಮಾಜಿ ಸದಸ್ಯೆ ದೇವಿಕಾ ರೈ, ದೈಹಿಕ ಶಿಕ್ಷಕರ ಪರಿವೀಕ್ಷಕ ಗುರುನಾಥ್ ಬಾಗೇವಾಡಿ, ರವಿಕಲಾ, ರಾಜೇಶ್, ಜಿಲ್ಲಾ ಸಮನ್ವಯಾಧಿಕಾರಿ ಗೀತಾ, ಶಮಂತ್, ಜಯಂತ್, ಡಾ. ಭವ್ಯಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಯ ಸುಲೈಮಾನ್, ಬಶೀರ್ ಅಹ್ಮದ್, ಅಪ್ನಾದೇಶ್ ನೋಡಲ್ ಅಧಿಕಾರಿಗಳಾದ ಶೀನಶೆಟ್ಟಿ, ಕೃಷ್ಣ ಮೂಲ್ಯ ಮತ್ತಿತರರು ಇದ್ದರು.
ಇದೇ ವೇಳೆ ನಿವೃತ್ತ ಶಿಕ್ಷಕಿ ಶಶಿಕಲಾ ಕೆ. ಇವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸ್ವಾಗತಿಸಿ, ಶಿಕ್ಷಕ ಶಿವಪ್ರಸಾದ್ ವಂದಿಸಿದರು. ಶಿಕ್ಷಕಿ ಶಾಂಭವಿ ಕೆ. ಕಾರ್ಯಕ್ರಮ ನಿರೂಪಿಸಿದರು.

