ಸಿದ್ಧಕಟ್ಟೆ: ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಕಟ್ಟೆಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ 94ಸಿ ಮತ್ತಿತರ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್ ಮತ್ತಿತರರು ಚಿತ್ರದಲ್ಲಿದ್ದಾರೆ.

ಜಿಲ್ಲೆಯಲ್ಲಿ ಗರಿಷ್ಟ 59 ಸಾವಿರ ಅರ್ಜಿ ಸಲ್ಲಿಕೆ: ಸಚಿವ ರೈ
ರಾಜ್ಯದಲ್ಲಿ ಈ ಹಿಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವಧಿ ಬಳಿಕ ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮತ್ತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ನಿವೇಶನ ನೀಡುವ ಮೂಲಕ ಬಡ ಜನತೆಗೆ ಹತ್ತಿರವಾಗುತ್ತಿದೆ. ಕಳೆದ ವರ್ಷ ರಾಜ್ಯದಲ್ಲೇ ಪ್ರಥಮ ಬಾರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 94ಸಿ ಯೋಜನೆಯಡಿ ಹಕ್ಕುಪತ್ರ ವಿತರಿಸಲಾಗಿದ್ದು, ಇದೀಗ ಜಿಲ್ಲೆಯಲ್ಲಿ ಒಟ್ಟು 59ಸಾವಿರ ಮಂದಿ 94ಸಿಗೆ ಅರ್ಜಿ ಸಲ್ಲಿಸುವ ಮೂಲಕ ರಾಜ್ಯದಲ್ಲಿ ಗರಿಷ್ಟ ಸಂಖ್ಯೆಯಾಗಿ ಗುರುತಿಸಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ತಾಲ್ಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಕಟ್ಟೆಯಲ್ಲಿ ಶುಕ್ರವಾರ ಸಂಜೆ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು ಅಕ್ರಮ -ಸಕ್ರಮ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ‘ಹಸಿವು ಮುಕ್ತ’ ಸಮಾಜ ನಿರ್ಮಿಸಲು ಶ್ರಮಿಸುತ್ತಿರುವ ಸರ್ಕಾರವು ‘ಅನ್ನಭಾಗ್ಯ’ ಯೋಜನೆಯಡಿ ಜಿಲ್ಲೆಗೆ ವಾರ್ಷಿಕ ಒಟ್ಟು ರೂ 40ಕೋಟಿ ಮೊತ್ತದ ಅನುದಾನ ವಿನಿಯೋಗಿಸಲಾಗುತ್ತಿದೆ. ಕಂದಾಯ ಅದಾಲತ್, ಪಿಂಚನಿ ಅದಾಲತ್, ಸಾಮಾಜಿಕ ಸಬಲೀಕರಣ, ವಿದ್ಯಾಸಿರಿ, ವಿದ್ಯಾರ್ಥಿ ವೇತನ, ಸಾಲ ಮನ್ನಾ, ಭಾಗ್ಯಜ್ಯೋತಿ, ಹೈನುಗಾರಿಗೆ ಸಹಾಯಧನ ಹೀಗೆ ಚುನಾವಾಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆಗಳಲ್ಲಿ ಶೇ.85ಕ್ಕೂ ಮಿಕ್ಕಿ ಯೋಜನೆ ಪೂರೈಸಲಾಗಿದೆ ಎಂದರು.

ಇಲ್ಲಿನ ರೂ 36ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹಿತ ಸಿದ್ಧಕಟ್ಟೆ-ಕರ್ಪೆ-ಅಣ್ಣಳಿಕೆ, ಕರ್ಪೆ-ಮಾಡಮೆ, ಹೊಕ್ಕಾಡಿಗೋಳಿ -ಪೂಂಜ-ಮಾವಿನಕಟ್ಟೆ, ಅಣ್ಣಳಿಕೆ- ಕರಿಮಲೆ ರಸ್ತೆ ಮತ್ತಿತರ ಜಿಲ್ಲಾ ಪಂಚಾಯಿತಿ ರಸ್ತೆಗಳನ್ನು ಕೂಡಾ ಲೋಕೋಪಯೋಗಿ ರಸ್ತೆಯನ್ನಾಗಿ ಪರಿವರ್ತಿಸಿ ಬಹುಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ವಿರೋಧಿಗಳ ಅನಗತ್ಯ ಟೀಕೆಗೆ ಅಭಿವೃದ್ಧಿಯಿಂದಲೇ ಉತ್ತರಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯ ಪ್ರಭಾಕರ ಪ್ರಭು, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಉಪಾಧ್ಯಕ್ಷೆ ವಿನಯಾ ಪೂಜಾರಿ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ ಪೂಜಾರಿ, ಮಾಜಿ ಅಧ್ಯಕ್ಷ ದೇವಪ್ಪ ಕರ್ಕೇರ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಸಿದ್ಧಕಟ್ಟೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ ಮತ್ತಿತರರು ಇದ್ದರು.
ಇದೇ ವೇಳೆ ಇಲ್ಲಿನ ಸಂಗಬೆಟ್ಟು, ಕರ್ಪೆ, ಕುಕ್ಕಿಪಾಡಿ, ಎಲಿಯನಗೋಡು, ರಾಯಿ, ಕೊಯಿಲ, ಅರಳ, ಕೊಡಂಬೆಟ್ಟು, ಪಿಲಿಮೊಗರು ಗ್ರಾಮದ ಒಟ್ಟು 423 ಫಲಾನುಭವಿಗಳ ಪೈಕಿ ಬಾಕಿ ಉಳಿಸಿದ್ದ 150 ಮಂದಿಗೆ ವಿವಿಧ ಹಕ್ಕುಪತ್ರ ವಿತರಿಸಲಾಯಿತು. ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಂದಾಯ ನಿರೀಕ್ಷಕ ನವೀನ ಕುಮಾರ್ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
