ಮುಂಬಯಿ: ದೇಶವಿದೇಶಗಳಲ್ಲಿ ಹಣಕಾಸು ಕ್ಷೇತ್ರದ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇಲೆಟ್ಸ್ ಟೆಕ್ನೋವಿೂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮಹಾರಾಷ್ಟ್ರ ರಾಜ್ಯ ಮಟ್ಟದಲ್ಲಿ ಆಯೋಜಿಸಿದ್ದ ಮಹಾರಾಷ್ಟ್ರ ಸಹಕಾರಿ ಶೃಂಗಸಭೆ-2016 ಸಮಾರಂಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರನ್ನು ಪ್ರತಿಷ್ಠಿತ ಸಹಕಾರಿ ಧುರೀಣ ಪುರಸ್ಕಾರವನ್ನು ನೀಡಿ ಸನ್ಮಾನಿಸಿ ಗೌರವಿಸಿತು.

ದಕ್ಷಿಣ ಮುಂಬಯಿ ಕೊಲಬಾ ಕೋಪರೇಜ್ ಅಲ್ಲಿನ ತಾಜ್ ಪ್ರೆಸಿಡೆಂಟ್ನ ವಿವಂಟಾ ತಾರಾ ಹೊಟೇಲ್ನಲ್ಲಿ ಇಂದಿಲ್ಲಿ ಬುಧವಾರ ನಡೆಸಲ್ಪಟ್ಟ ಏಕದಿನದ ಬ್ಯಾಂಕಿಂಗ್ ಎಂಡ್ ಫೈನಾನ್ಸ್ ಸರ್ವೀಸಸ್ ಇಸ್ಯೂಸ್ (ಬಿಎಫ್ಎಸ್ಐ)ನ ರಾಜ್ಯ ಮಟ್ಟದ ಮಹಾರಾಷ್ಟ್ರ ಕೋ.ಅಪರೇಟಿವ್ ಶೃಂಗಸಭೆ-2016 ಭವ್ಯ ಸಮಾರಂಭದಲ್ಲಿ ಇಲೆಟ್ಸ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ| ರವಿ ಗುಪ್ತಾ ಅವರನ್ನೊಳಗೊಂಡು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಮಹಾರಾಷ್ಟ್ರ ಸರಕಾರದ ಕೋ.ಅಪರೇಟಿವ್ ಕಾರ್ಯದರ್ಶಿ ರಾಜಗೋಪಾಲ್ ದೇವ್ರಾ ಅವರು ಜಯ ಸುವರ್ಣ ಅವರಿಗೆ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.



ಸುಮಾರು 100 ಸಂಯುಕ್ತ, 50 ಸರಕಾರಿ (ಗವರ್ನ್ಮೆಂಟ್), 150 ಸಹಕಾರಿ (ಕೋ.ಅಪರೇಟಿವ್) ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳನ್ನೊಳಗೊಂಡು ಕಾರ್ಯಾಚರಿಸುತ್ತಾ ಆಧುನಿಕ ತಂತ್ರಜ್ಞಾನ ಬಳಕೆ ಮತ್ತಿತರ ಸೇವೆಗಳ ಅರಿವು ಮೂಡಿಸುತ್ತಾ ವಿವಿಧ ರಾಜ್ಯಗಳಲ್ಲಿ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿರುವ ಇಲೆಟ್ಸ್ ಇಂದಿಲ್ಲಿ ಮಹಾರಾಷ್ಟ್ರ ರಾಜ್ಯ ಅಧಿವೇಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಣ್ಯರಾಗಿ ಉಪಸ್ಥಿತ ಸಹಕಾರಿ ಇಲಾಖೆಯ ಆಯುಕ್ತ ಚಂದ್ರಕಾಂತ್ ದಾಳ್ವಿ, ಯುಐಡಿಎ ಸಹಾಯಕ ಡೈರೆಕ್ಟರ್ ಜನರಲ್ ಸಮ್ನೇಶ್ ಜೋಶಿ, ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಕಾರ್ಯಾಧ್ಯಕ್ಷ ವಿದ್ಯಾಧರ್ ವಿ.ಅನಸ್ಕರ್, ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಪ್ರಮೋದ್ ಕಾರ್ನಾಡ್ ಸೇರಿದಂತೆ ದೇಶದಾದ್ಯಂತದ ಬ್ಯಾಂಕಿಂಗ್ ವಲಯದ ಪ್ರತಿಷ್ಠಿತ ಗಣ್ಯರು, ಉನ್ನತಾಧಿಕಾರಿಗಳು, ಭಾರತ್ ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್, ಭಾರತ್ ಬ್ಯಾಂಕ್ನ ನೂತನ ಮಹಾ ಪ್ರಂಬಧಕರಾಗಿ ನಿಯುಕ್ತಿಗೊಂಡಿರುವ ವಿದ್ಯಾನಂದ ಎಸ್.ಕರ್ಕೇರಾ ಉಪಸ್ಥಿತರಿದ್ದು ಜಯ ಸುವರ್ಣ ಅವರನ್ನು ಶುಭಾರೈಸಿದರು.




