ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಅಸಮರ್ಪಕ ಘನ ತ್ಯಾಜ ವಿಲೇವಾರಿ ವಿಚಾರ ಮಂಗಳವಾರ ನಡೆದ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿದ್ವನಿಸಿತು. ತ್ಯಾಜ್ಯ ವಿಲೇವಾರಿ ಗುತ್ತಿಗೆದಾರನ ವಿರುದ್ಧ ಸದಸ್ಯರು ಪಕ್ಷ ಬೇಧ ಮರೆತು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು.

ಅಜೆಂಡಾ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ಸದಸ್ಯ ಗೋವಿಂದ ಪ್ರಭು ವಿಷಯ ಪ್ರಸ್ತಾಪಿಸಿ ಘನ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಈ ವಿಚಾರದಲ್ಲಿ ಸಹಾಯಕ ಕಮೀಷನರ್ ಅವರ ಉಪಸ್ಥಿತಿಯಲ್ಲಿ ಸೇರಿದಂತೆ ಹಲವಾರು ಬಾರಿ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದಿದೆ ಹೊರೆತು ಕಸ ವಿಲೇವಾರಿ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಕೂಡಾ ಧ್ವನಿ ಗೂಡಿಸಿ ಗುತ್ತಿಗೆದಾರನ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಒಂದು ಹಂತದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕೆಂದು ಸದಸ್ಯ ದೇವದಾಸ ಶೆಟ್ಟಿ ಬೇಡಿಕೆಯನ್ನು ಮುಂದಿಟ್ಟರು. ಆದರೆ ಕಾಂಗ್ರೆಸ್ ಸದಸ್ಯರು ಮಧ್ಯ ಪ್ರವೇಶಿಸಿ ಈ ವಿಚಾರದಲ್ಲಿ ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳುವ ಎಂದು ಸಲಹೆ ನೀಡಿದರು. ಈ ವೇಳೆ ಬಿಜೆಪಿ ಸದಸ್ಯರು ಇದೇ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಬೇಕೆಂದು ಪಟ್ಟು ಹಡಿದರು.

ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಸೂಚನೆಯಂತೆ ಘನ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಗುತ್ತಿಗೆದಾರ ಎಮ್ಮೆಕೆರೆ ಸಲಾಂಗೆ ವಹಿಸಲಾಗಿತ್ತು. ಆದರೆ ಗುತ್ತಿಗೆದಾರನ ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದಾಗಿ ಸಚಿವರ ಘನತೆಗೆ ಕುಂದು ಉಂಟಾಗುತ್ತಿದೆ ಎಂದು ಸದಸ್ಯ ಗೋವಿಂದ ಪ್ರಭು ಈ ಸಂದರ್ಭದಲ್ಲಿ ಸಭೆಯ ಗಮನ ಸೆಳೆದರು. ಕೊನೆಗೆ ಈ ಕುರಿತಾಗಿ ವಿಶೇಷ ಸಭೆ ಕರೆಯಲು ನಿರ್ಣಯ ಕೈಗೊಂಡರೆ ಬಿಜೆಪಿ ಸದಸ್ಯರು ಇದಕ್ಕೆ ವಿರೋಧ ದಾಖಲಿಸಿದರು.

ಮನಪಾಕ್ಕೆ ಪತ್ರ: ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 12 ಮೀಟರ್ ಎತ್ತರದ ಹೊಸ ಡ್ಯಾಂನಿಂದಾಗಿ ಪುರಸಭಾ ವ್ಯಾಪ್ತಿಯ ಬಿ.ಮೂಡ ಮತ್ತು ಪಾಣೆಮಂಗಳೂರಿನ ಕೆಲವು ಭಾಗಗಳು ಮುಳುಗಡೆಯಾಗುವ ಹಿನ್ನೆಲೆಯಲ್ಲಿ ಕೃಷಿಕರು ಹಾಗೂ ಪುರವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಈ ಡ್ಯಾಂನಿಂದ ಈ ಎರಡು ಗ್ರಾಮಗಳಲ್ಲಿ ಎಷ್ಟು ಜಮೀನು ಮುಳುಗಡೆಯಾಗುತ್ತದೆ ಎಂದು ಮನಪಾದಿಂದ ಮಾಹಿತಿ ಪಡೆದುಕೊಳ್ಳುವಂತೆ ಸದಸ್ಯ ದೇವದಾಸ ಶೆಟ್ಟಿ ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು, ಈ ಬಗ್ಗೆ ಯಾವುದೇ ಸಭೆಗಳಿಗೆ ನಮ್ಮನ್ನು ಕರೆದಿಲ್ಲ. ಹಾಗೆಯೇ ಯಾವುದೇ ಮಾಹಿತಿಯನ್ನು ಕೂಡಾ ನೀಡಿಲ್ಲ ಎನ್ನುತ್ತಿದ್ದಂತೆ ಸದಸ್ಯೆ ಚಂಚಲಾಕ್ಷಿ ಅವರು ಪ್ರತಿಕ್ರಿಯಿಸಿ ಸರ್ವೇ ಸಂದರ್ಭದಲ್ಲಿ ಜಮೀನು ಕಳೆದುಕೊಳ್ಳುವ ಸಂತ್ರಸ್ತರಿಗೆ ಮಾಹಿತಿ ನೀಡಿಲ್ಲ. ಇನ್ನು ಪುರಸಭೆಗೆ ಮಾಹಿತಿ ನೀಡುತ್ತಾರೆಯೇ ಎಂದು ವ್ಯಂಗ್ಯವಾಡಿದರು. ಸದಸ್ಯರ ಸಲಹೆಯಂತೆ ಈ ವಿಚಾರದಲ್ಲಿ ಮನಪಾದಿಂದ ಮಾಹಿತಿ ಕೇಳಿ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಿಷ್ಟಾಚಾರ ಉಲ್ಲಂಘನೆ: ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ನಿರ್ಮಾಣಗೊಂಡಿರುವ ಉದ್ಯಾನವನಕ್ಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸದೆ ಏಕಾಏಕಿ ಶಿಷ್ಟಾಚಾರ ಉಲ್ಲಂಘಿಸಿ ‘ಜೋಡುಮಾರ್ಗ ಉದ್ಯಾನವನ’ ಎಂದು ನಾಮಕರಣಗೊಳಿಸಿರುವುದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರಲ್ಲದೆ ಪುರಸಭೆಯ ವತಿಯಿಂದ ಉದ್ಯಾನವನದ ಸುತ್ತ ಮಣ್ಣು ಸಮತಟ್ಟು ಮಾಡಿ ಇಂಟರ್‍ಲಾಕ್ ಹಾಕಲು ಮುಂದಾಗಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಎಂಜಿನಿಯರ್ ಡೊಮೇನಿಕ್ ಡಿಮೆಲ್ಲೋ ಹಾಗೂ ಮುಖ್ಯಾಧಿಕಾರಿ ಸುಧಾಕರ್ ಅವರು ಸಮರ್ಥಿಸಿಕೊಳ್ಳಲು ಯತ್ನಿಸಿದರು.
1.40 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಿರುವ ಗುತ್ತಿಗೆದಾರನಿಗೆ ಅದೇ ಯೋಜನೆಯ ಅನುದಾನದಲ್ಲಿ ಇಂಟರ್‍ಲಾಕ್ ಅಳವಡಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಸದಸ್ಯ ಗೋವಿಂದ ಪ್ರಭು ಪುರಸಭೆಯಿಂದಲೂ ಇದಕ್ಕೆ ಅನುದಾನವನ್ನು ಬಳಸಲಾಗಿರುವುದರಿಂದ ಅದರ ಪೂರ್ತಿ ಖರ್ಚು ವೆಚ್ಚದ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಿದ ಬಳಿಕವೇ ಉದ್ಯಾನವನದ ನಿರ್ವಹಣೆಯ ಕುರಿತು ತೀರ್ಮಾನಿಸುವ ಎಂದು ಚರ್ಚೆಗೆ ತೆರೆ ಎಳೆದರು.
ಗೋವಿಂದ ಜಪ: ಪುರಸಭಾ ವ್ಯಾಪ್ತಿಯಲ್ಲಿ ನಡೆಯುವ ಕೆಲವು ಕಾಮಗಾರಿಗಳನ್ನು ಅರ್ಧದಲ್ಲೇ ನಿಲ್ಲಿಸಲಾಗುತ್ತಿದೆ. ಕೊನೆಗೆ ಸಾರ್ವಜನಿಕರು ಪ್ರಶ್ನಿಸಿದರೆ ಸದಸ್ಯ ಗೋವಿಂದ ಪ್ರಭುವಿನ ಜಪಮಾಡಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಅವರನ್ನು ತರಾಟೆಗೆ ತೆಗೆದುಕೊಂಡರು.
ಹದೆಗೆಟ್ಟ 91 ಕಿ.ಮೀ. ರಸ್ತೆ: ಪೈಪ್‍ಲೈನ್‍ಗಳಿಂದಾಗಿ ಪುರಸಭಾ ವ್ಯಾಪ್ತಿಯ 91 ಕಿ.ಮೀಟರ್ ರಸ್ತೆಯು ಹದಗೆಟ್ಟಿದ್ದು ಕೆಯುಡಬ್ಲ್ಯೂಎಸ್ ಇದರ ದುರಸ್ಥಿಗೆ ಕೇಲವ 4 ಕೋಟಿ ರೂ. ಮಾತ್ರ ಠೇವಣಿ ಇಟ್ಟಿದೆ. ಈ ಅನುದಾನ ರಸ್ತೆ ದುರಸ್ಥಿಗೆ ಏನೇನು ಸಾಲದು. ಸುಮಾರು 16.30 ಕೋಟಿ ರೂ. ಬೇಕಾಗಬಹುದೆಂದು ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಕೇಂದ್ರ ಸರಕಾರದ ಚ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪುರಸಭೆಯಿಂದ ವಿವಿಧ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಯಿತು. ಮುಂದಿನ ಡಿಸೆಂಬರ್ ಅಂತ್ಯದ ಒಳಗೆ ಬಂಟ್ವಾಳ ಪುರಸಭೆಯನ್ನು ಬಯಲು ಶೌಚ ಮುಕ್ತ ನಗರವೆಂದು ಘೋಷಿಸಲು ತೀರ್ಮಾಣಿಸಲಾಯಿತು.
ಅಧ್ಯಕ್ಷ ರಾಮಾಕೃಷ್ಣ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕಲಾಪ ನಡೆಸಿದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು. ಸದಸ್ಯರಾದ ವಾಸು ಪೂಜಾರಿ, ಗಂಗಾಧರ, ಪ್ರವೀಣ ಬಿ., ಜಗದೀಶ್ ಕುಂದರ್, ವಸಂತಿ, ಇಕ್ಬಾಲ್ ಗೂಡಿನಬಳಿ, ಮುನೀಶ್ ಅಲಿ, ಸುಗುಣಾ ಕಿಣಿ, ಭಾಸ್ಕರ್ ಟೈಲರ್ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು.
