ಮೂಡುಬಿದಿರೆ: ಪಡುಕೊಣಾಜೆ ಗ್ರಾಮದ ಅಯ್ಯಪ್ಪ ಮಂದಿರದಿಂದ ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಡುಕೊಣಾಜೆ ಗ್ರಾಮದ ಹೌದಾಲು ಸತೀಶ್ ಸಾಲ್ಯಾನ್ ಅವರ ಮಗ ವಿಕಾಸ್ ಆಲಿಯಾಸ್ ವಿಕ್ಕಿ(21)ಎಂದು ತಿಳಿದುಬಂದಿದೆ.
ಆರೋಪಿ ಸೆ.19ರಂದು ಪಡುಕೊಣಾಜೆ ಗ್ರಾಮದ ಕಲ್ಕುದುರು ಎಂಬಲ್ಲಿನ ಅಯ್ಯಪ್ಪ ಮಂದಿರದಿಂದ ಹಣತೆ, ಆರತಿ ತಟ್ಟೆ ಸೇರಿದಂತೆ ಸುಮಾರು 20 ಸಾವಿರ ಮೌಲ್ಯದ ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಿ ಗುಜುರಿ ಅಂಗಡಿಗೆ ಮಾರಾಟ ಮಾಡಿದ್ದ. ಅಯ್ಯಪ್ಪ ಮಂದಿರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲವಕುಂದರ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರು ಕೂಡ ಪ್ರತ್ಯೇಕ ದೂರು ನೀಡಿ ಕಳ್ಳತನ ಪ್ರಕರಣದಲ್ಲಿ ಕನಿಷ್ಟ ಇಬ್ಬರು ಆರೋಪಿಗಳು ಶಾಮೀಲಾಗಿದ್ದು ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೆನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ವಿಕಾಸ್ ಆಲಿಯಾಸ್ ವಿಕ್ಕಿಯನ್ನು ಬಂಧಿಸಿ ಕೋರ್ಟ್‍ಗೆ ಹಾಜರುಪಡಿಸಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿಕ್ಕಿ ಈ ಹಿಂದೆ ಇದೇ ಅಯ್ಯಪ್ಪ ಮಂದಿರದಲ್ಲಿ ಅಯ್ಯಪ್ಪ ವೃತಧಾರಿಯಾಗಿ ಮಾಲೆ ಧರಿಸಿದ್ದ ಎನ್ನಲಾಗಿದೆ.

