ಬಂಟ್ವಾಳ: ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ಅಡ್ಡವಾಗಿ ತುಂಬೆಯಲ್ಲಿ ನಿರ್ಮಿಸಿರುವ ನೂತನ ವೆಂಟೆಡ್ ಡ್ಯಾಂನ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು ಡಿಸೆಂಬರ್‍ನಿಂದ ನೀರು ಶೇಖರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ಡ್ಯಾಂ ನಿರ್ಮಾನದಿಂದ ಮುಳುಗಡೆಯಾಗುವ ಸಾವಿರಾರು ಎಕ್ರೆ ಜಮೀನುಗಳ ಮಾಲಕರಿಗೆ ನಯಾ ಪೈಸೆಯೂ ಪರಿಹಾರ ನೀಡದೆ ನೀರು ಶೇಖರಣೆಗೆ ಮನಪಾ ಮುಂದಾಗಿರುವುದರಿಂದ ಸಂತ್ರಸ್ತರಲ್ಲಿ ಆತಂಕ ವ್ಯಕ್ತವಾಗಿದೆ.
ಪ್ರಸ್ತುತ ವರ್ಷ ಕೂಡಾ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಯಾಗಿದೆ. ಈಗಾಗಲೇ ನೇತ್ರಾವತಿ ನದಿಯಲ್ಲಿ ಮರಳು ಗೋಚರಿಸುತ್ತಿದ್ದು ಮುಂದಿನ ಬೇಸಿಗೆಯಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ಹಳೆ 3 ಮೀಟರ್ ಡ್ಯಾಂನ ಬದಲಿಗೆ ಹೊಸ ಡ್ಯಾಂನಲ್ಲಿ 7 ಮೀಟರ್ ನೀರು ಶೇಖರಣೆಗೆ ಡ್ಯಾಂ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದ್ದು ಅಕ್ಟೋಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನೀರು ನಿಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನೂತನ ಡ್ಯಾಂ ನಿರ್ಮಾಣದ ಕಾಮಗಾರಿ 2014ರಲ್ಲಿ ಆರಂಭವಾಗಿದ್ದು ಈ ಡ್ಯಾಂನಲ್ಲಿ ನೀರು ಶೇಖರಣೆ ಮಾಡುವುದರಿಂದ ಬಂಟ್ವಾಳ ತಾಲೂಕಿನ 8 ಗ್ರಾಮದ ಸಾವಿರಾರು ಎಕ್ರೆ ಕೃಷಿ ಜಮೀನು ಮುಳುಗಡೆಯಾಗಲಿದ್ದು ನೂರಾರು ಮಂದಿ ಸಂತ್ರಸ್ತರಾಗಲಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಳುಗಡೆಯಾಗಲಿರುವ ಜಮೀನಿನ ಸರ್ವೇ ನಡೆಸಲು 2009ರಿಂದ ಆರಂಭವಾಗಿದೆಯಾದರೂ ಈವರೆಗೂ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ. ಸರ್ವೇ ಕಾರ್ಯ ಪೂರ್ಣಗೊಳಿಸದೆ, ಪರಿಹಾರವೂ ನೀಡದೆ ಡ್ಯಾಂನಲ್ಲಿ ನೀರು ಶೇಖರಣೆಗೆ ಮುಂದಾಗಿರುವುದರಿಂದ ಆತಂಕಕ್ಕೊಳಗಾಗಿರುವ ಸಂತ್ರಸ್ತ ರೈತರು ಹೋರಾಟದ ತೀವ್ರತೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಡ್ಯಾಂ ನಿರ್ಮಾಣಕ್ಕೆ ಆರಂಭದಲ್ಲಿದ್ದ 24 ಕೋಟಿ ರೂ. ಇದ್ದ ವೆಚ್ಚ ಇದೀಗ 75 ಕೋಟಿ ರೂ.ಗೆ ಏರಿದೆ. ಡ್ಯಾಂನ ಎತ್ತರವನ್ನು 12 ಮೀಟರ್‍ನಿಂದ 16 ಮೀಟರ್‍ಗೆ ಏರಿಕೆ ಮಾಡಲಾಗಿದೆ. ಏರಿಕೆ ಮಾಡಿರುವ 4 ಮೀಟರ್ ಡ್ಯಾಂನ ಗೇಟ್ ವ್ಯವಸ್ಥೆಗಾಗಿ ಮೀಸಲಿಡಲಾಗಿದೆ. ಇದು ಯಂತ್ರ ಚಾಲಿತ ಗೇಟ್ ಆಗಿರುತ್ತದೆ. ಡ್ಯಾಂ 16 ಮೀಟರ್ ಎತ್ತರವಿದ್ದರೂ ನೀರು ಶೇಖರಣಾ ಸಾಮಾಥ್ರ್ಯ 12 ಮೀಟರ್ ಮಾತ್ರವಾಗಿದೆ. 12 ಮೀಟರ್‍ನಲ್ಲಿ ಪ್ರಥಮ ಹಂತದಲ್ಲಿ 7 ಮೀಟರ್ ಮಾತ್ರ ನೀರು ಶೇಖರಿಸಲಾಗುವುದು.
2009ರಲ್ಲಿ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಹೊಸ ಡ್ಯಾಂನಲ್ಲಿ 7 ಮೀಟರ್ ನೀರು ನಿಲ್ಲಿಸಿದಾಗ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು, ಪಾಣೆಮಂಗಳೂರು, ಬಿ.ಮೂಡ, ಕಳ್ಳಿಗೆ, ನರಿಕೊಂಬು, ಬಂಟ್ವಾಳ, ತುಂಬೆ, ನಾವೂರು ಗ್ರಾಮದ 1092 ಎಕ್ರೆ ಜಮೀನು ಮುಳುಗಡೆಯಾಗಲಿದೆ ಎಂದು ಮನಪಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಆ ಬಳಿಕ ಸರ್ವೇ ನಡೆಸಿದ ವಿವಿಧ ಗುತ್ತಿಗೆ ಕಂಪೆನಿಗಳ ಅಧಿಕಾರಿಗಳು 916, 763, 385, 276 ಎಕ್ರೆ ಜಮೀನು ಮಾತ್ರ ಮುಳುಗಡೆಯಾಗಲಿದೆ ಎಂದು ಗೊಂದಲದ ವರದಿ ನೀಡಿರುವುದರಿಂದ ಸಂತ್ರಸ್ತರಲ್ಲಿ ಆತಂಕ ಮೂಡಿಸಿದೆ. ಮಂಗಳೂರು ಮೇಯರ್ ಹರಿನಾಥ್ ಅಧಿಕಾರಿಗಳಿಂದ ಮಾಹಿತಿ ಪಡೆದು 5 ಮೀಟರ್ ನೀರು ನಿಲ್ಲಿಸಿದರೆ 53 ಎಕ್ರೆ, 6 ಮೀಟರ್‍ಗೆ 243, 7 ಮೀಟರ್‍ಗೆ 400 ಎಕ್ರೆ ಮಾತ್ರ ಮುಳುಗಡೆಯಾಗಲಿದೆ ಎಂದು ಹೇಳುವ ಮೂಲಕ ಸಂತ್ರಸ್ತರನ್ನು ಮತ್ತೊಂದು ಆತಂಕಕ್ಕೆ ದೂಡಿದ್ದಾರೆ ಎಂದು ರೈತ ಮುಖಂಡ ಎನ್.ಕೆ.ಇದಿನಬ್ಬ ಹೇಳಿದ್ದಾರೆ.
ಸರ್ವೇಯಲ್ಲಿ ಗೊಂದಲ. ಕೋಟ್ಯಾಂತರ ರೂ. ನಷ್ಟ: ನೂತನ ಡ್ಯಾಂನಿಂದ ಮುಳುಗಡೆಯಾಗಲಿರುವ ಜಮೀನಿನ ಸರ್ವೇ ನಡೆಸಲು 2009ರಿಂದ ಇಲ್ಲಿಯವರೆಗೆ ಒಟ್ಟು 7 ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಪ್ರತೀ ಗುತ್ತಿಗೆ ಸಂಸ್ಥೆಯವರೂ ನಡೆಸಿರುವ ಸರ್ವೇಯಲ್ಲಿ ಭಾರೀ ವ್ಯತ್ಯಾಸಗಳು ಕಂಡು ಬಂದಿದೆ. ಸರ್ವೇ ವರದಿಯಲ್ಲಿ ಗೊಂದಲ ಇರುವುದರಿಂದ ಸಂತ್ರಸ್ತರು ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಮೊದಲ ಬಾರಿ ಸರ್ವೇ ನಡೆಸಿದ ಸಂಸ್ಥೆಯವರು 7 ಮೀಟರ್ ನೀರು ಶೇಖರಣೆಯಿಂದ 916 ಎಕ್ರೆ ಜಮೀನು ಮುಳುಗಡೆಯಾಗಲಿದೆ ಎಂದು ವರದಿ ನೀಡಿದರೆ ಆ ಬಳಿಕ ಸರ್ವೇ ನಡೆಸಿದ ಸಂಸ್ಥೆಗಳು 763, 386, 276 ಎಕ್ರೆ ಮಾತ್ರ ಮುಳುಗಡೆಯಾಗಲಿದೆ ಎಂದು ವರದಿ ನೀಡಿದೆ. ಪ್ರಸ್ತುತ ಮೈಸೂರಿನ ಸರ್ವೇ ಸಂಸ್ಥೆಯೊಂದು ಸರ್ವೇ ಕಾರ್ಯದಲ್ಲಿ ತೊಡಗಿದೆ. ಈ ಸಂಸ್ಥೆಗೆ ಸರ್ವೇ ನಡೆಸಲು 80 ಲಕ್ಷ ರೂ. ಟೆಂಟರ್ ನೀಡಲಾಗಿದೆ. ಈ ಹಿಂದಿನ ಪ್ರತೀಯೊಂದು ಸಂಸ್ಥೆಗೂ 50, 70 ಲಕ್ಷ ರೂ. ನಂತೆ ಟೆಂಡರ್ ನೀಡಲಾಗಿತ್ತು. ಸರ್ವೇ ಸಂಸ್ಥೆಗಳು ಅವೈಜ್ಞಾನಿಕವಾಗಿ ಸರ್ವೇ ನಡೆಸಿ ವರದಿ ನೀಡುವುದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಅಲ್ಲದೆ ಸಂತ್ರಸ್ತರಲ್ಲೂ ಆತಂಕವನ್ನು ಉಂಟುಮಾಡುತ್ತಿದೆ.

