ಬಂಟ್ವಾಳ: ನಮ್ಮ ದೇಶದಲ್ಲಿ 2 ನೇಯ ಸ್ವಾತಂತ್ರ್ಯ ಸಂಗ್ರಾಮ ನಡೆದರೆ ಅದು ಗೋವುಗಳ ರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಎಂದು ವಿವೇಕಾನಂದ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಹೇಳಿದರು.
ಅವರು ಗೋವಿಗಾಗಿ ಆತ್ಮಾರ್ಪಣೆ ಮಾಡಿದ ಮಂಗಲಪಾಂಡೆಯ ಪ್ರೇರಣೆಯಲ್ಲಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮಹಾಸಂಕಲ್ಪದಂತೆ ಮಧೂರಿನಿಂದ ಹೊರಟಿರುವ ಗೋ-ಕಿಂಕರಯಾತ್ರೆಯು ಶ್ರೀ ರಾಮ ಕಲ್ಲಡ್ಕ ಶಾಲೆಯ ವಠಾರಕ್ಕೆ ಆಗಮಿಸಿದ ವೇಳೆ ರಥಕ್ಕೆ ಪುಷ್ಪಾರ್ಚನೆ ಮಾಡಿ, ಬಳಿಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೋವು ಧರ್ಮ ಸಂಸ್ಕೃತಿ ಒಂದು ಭಾಗ, ಗೋವುಗಳ ಹತ್ಯೆಯಾದರೆ ಆಧ್ಯಾತ್ಮಿಕ, ಭಾವನಾತ್ಮಕ ಚಿಂತನೆಗಳಿಗೆ ಒಡೆತ ಬೀಳುತ್ತದೆ, ಹಾಗಾಗಿ ಜನಜಾಗೃತಿಗೋಸ್ಕರ ಈ ಅಭಿಯಾನ ನಡೆಯುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಗೋವುಗಳರಕ್ಷಣೆಗೆ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾಲ ಬಂದಿರುವುದು ನಾಚಿಕೆಯ ವಿಷಯ ಎಂದು ಹೇಳಿದರು. ಹಿಂದುಗಳ ಧಾರ್ಮಿಕತೆ ಚಿಂತನೆಯ ಕೇಂಂದ್ರ ಬಿಂದು ಗೋವು. ಗೋವುಗಳು ಉಳಿದರೆ ನಮ್ಮದೇಶದ ಆರ್ಥಿಕತೆಯು ಉಳಿಯುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಉತ್ತರ ಕಾಶಿಯ ಮಠಾಧೀಶರಾದ ಶ್ರೀ ಶ್ರೀ ಶ್ರೀ ರಾಮಚಂದ್ರ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ಗೋ-ಕಿಂಕರಯಾತ್ರೆಯ ಪ್ರಮುಖರಾದ ಕೋಲ್ಪೆಗುತ್ತು ರಾಜರಾಮ್ ಭಟ್, ಡಾ| ವೈ.ಕೃಷ್ಣಮೂರ್ತಿ ಮತ್ತು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜಾರಾಮ್ ಭಟ್, ಶೈಲಜಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಮಂಗಲ ಗೋಯಾತ್ರೆ ಸಮಿತಿಯ ಅಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್ ವಂದಿಸಿದರು. ಪ. ಪೂ. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ನಿರೂಪಿಸಿದರು.
