ಬಜಪೆ: ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರದಲ್ಲಿರುವ ‘ಪಿಲಿ ಬೈಲ್ ಯಮುನಕ್ಕ ‘ ತುಳು ಸಿನಿಮಾಕ್ಕೆ ಯಕ್ಷಗಾನ ಪಟ್ಲ ಸತೀಶ್ ಶೆಟ್ಟಿ ಅವರು ಹಾಡಿದ ‘ ಮಾಯಕಡೊಂಜಿ ಪೊಣ್ಣ ಗಾಳಿ’ ಹಾಡನ್ನು ಅವರದೇ ಸ್ವರದಲ್ಲಿ ಸುಶ್ರಾವ್ಯವಾಗಿ ಹಾಡಿ ಮನಸೆಳೆದ ಅಂಧ ಕಲಾವಿದ ಬಸವರಾಜ್ ಹುಬ್ಬಳ್ಳಿ ಅವರು ಹಾಡಿದಾಗ ತುಂಬು ಪ್ರಶಂಸೆ ವ್ಯಕ್ತಪಡಿಸಿದ ಪಟ್ಲ ಸತೀಶ್ ಶೆಟ್ಟಿ ಅವರು ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಎಕ್ಕಾರು ಬಂಟರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಟ್ಲ ಸತೀಶ್ ಶೆಟ್ಟಿ ಅವರು ಪಾಲ್ಗೊಳ್ಳುತ್ತಿರುವುದನ್ನು ಖಚಿತ ಪಡಿಸಿಕೊಂಡ ಬಸವರಾಜ್ ಅವರು, ಕಲಾವಿದ ಅಶೋಕ್ ಪೊಳಲಿ ಅವರಲ್ಲಿ ಹಾಡಲು ಅವಕಾಶ ಮಾಡಿಕೊಡುವಂತೆ ವಿನಂತಿಸಿ ಹಿನ್ನಲೆಯಲ್ಲಿ ಸಭಾ ಕಾರ್ಯಕ್ರಮದ ಮಧ್ಯೆಯೇ ಬಸವರಾಜ್ ಗೆ ಹಾಡಲು ಅವಕಾಶ ನೀಡಲಾಯಿತು.
ಪಟ್ಲರ ಧ್ವನಿಯನ್ನೇ ಅನುಕರಿಸಿ ಬಸವರಾಜ್ ಹಾಡಿದಾಗ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಭಾಂಗಣದಲ್ಲಿ ಸಭಿಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಬಸವರಾಜ್ ಅಂಧ ಕಲಾವಿದನಾಗಿರುವುದರಿಂದ ಸಭೆಯಲ್ಲಿನ ಈ ಪ್ರಕ್ರಿಯೆಯನ್ನು ಸ್ವತಃ ಪಟ್ಲ ಅವರೇ ಬಸವರಾಜ್ ಗೆ ಹೇಳಿದಾಗ ಅರೆಕ್ಷಣ ಭಾವುಕರಾದರು. ಬಂಟರ ಸಂಘದ ಕಾರ್ಯಕರ್ತರು ಗೌರವ ಧನದೊಂದಿಗೆ ಅವರನ್ನು ಅಭಿನಂದಿಸಿದರು.
ಪ್ರತಿಭೆಗೆ ಜಾತಿ, ಬಣ್ಣ, ವಿಕಲತೆ, ಧನ, ಕನಕಗಳಾವುದೂ ಮಾನದಂಡವಲ್ಲ. ಬದುಕನ್ನೇ ಸವಲಾಗಿ ಸ್ವೀಕರಿಸಿ ತನ್ನೊಳಗಿನ ಕಲಾವಿದನನ್ನು ಜಾಗೃತಗೊಳಿಸುವ ಕಾರಣದಿಂದ ಬಸವರಾಜ್ ನನ್ನು ಎಲ್ಲರೂ ಗುರುತಿಸುವಂತಾಯಿತು.
