ವಿಟ್ಲ: ಇಬ್ಬರು ಕುಡಿತದ ಮತ್ತಿನಲ್ಲಿ ವಿಟ್ಲದ ಕಾಸರಗೋಡು ರಸ್ತೆಯ ಬಾರ್‍ ಒಂದರ ಮುಂಭಾಗ ಪರಸ್ಪರ ಹೊಡೆದಾಟ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಧಾವಿಸಿದ ವಿಟ್ಲ ಪೊಲೀಸರು ಹಳೆಯ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

15vtl2-aroopigalu-1

ಅಳಿಕೆ ಗ್ರಾಮದ ಎರುಂಬು ನಿವಾಸಿ ನಂದಪ್ಪ ಅವರ ಪುತ್ರ ಗುರುರಾಜ್ ಬಲ್ಲಾಳ್(31) ಹಾಗೂ ವಿಟ್ಲ ಕಸಬಾ ಗ್ರಾಮದ ಕಾಶಿಮಠ ನಿವಾಸಿ ಲಕ್ಷ್ಮಣ ಭಂಡಾರಿ(34) ಬಂಧಿತ ಆರೋಪಿಗಳು. ಇವರು ಕಂಠಪೂರ್ತಿ ಮದ್ಯ ಕುಡಿದು ವಿಟ್ಲದ ಬಾರ್‍ನ ಮುಂಭಾಗ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹೊಡೆದಾಟ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಯತ್ನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರ ಪೈಕಿ ಗುರುರಾಜ್ ಬಲ್ಲಾಳ್ ಎಂಬಾತ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಳಿಕ ತಲೆಮರೆಸಿಕೊಂಡಿದ್ದ. ಗುರುರಾಜ್ ಬಲ್ಲಾಳ್‍ಗಾಗಿ ವಿಟ್ಲ ಪೊಲೀಸರು ಹುಡುಕಾಟ ನಡೆಸಿದ್ದರು. ಅದಲ್ಲದೇ ಈತನ ಮೇಲೆ ಈ ಹಿಂದೆ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿ ರೌಡಿ ಶೀಟರ್ ಪಟ್ಟಿಯಲ್ಲಿದ್ದ ಎನ್ನಲಾಗಿದೆ. ಗುರುರಾಜ್ ಬಲ್ಲಾಳ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

By Suddi9

Leave a Reply

Your email address will not be published. Required fields are marked *