ಸಾಗರದಲ್ಲಿ ಚಲಿಸುವ ನಾವೆಯೊಂದಕ್ಕೆ ಎಲ್ಲಿ ನೋಡಿದರೂ ಕಾಣುವುದು ನೀರು. ಗಾಳಿಯಿಂದ ಏಳುವ ಭೋರ್ಗರೆಯುವ ಅಲೆಗಳಿಂದ ಭೂಮಿಯ ಸುಳಿವೇ ಇಲ್ಲದೆ ದಿನಗಟ್ಟಲೇ ಅದು ಚಲಿಸಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಬಹು ಸಾಮಾನ್ಯ ಅಪಾಯಗಳಿಗೂ ಕೊರತೆಯಿಲ್ಲ. ಮೇಲೆ ಕಾಣದಂತೆ ನೀರಿನೊಳಗೆ ಮುಳುಗಿರುವ ದೈತ್ಯಾಕಾರದ ಬಂಡೆಗಳಿರಬಹುದು, ಮರಳಿನ ದಿಬ್ಬವಿದ್ದು ಆಳ ಕಡಿಮೆಯಿರಬಹುದು, ಅಪಾಯಕರವಾದ ಪ್ರವಾಹ ಸುಳಿಗಳಿರಬಹುದು, ಸುತ್ತಮುತ್ತಲೂ ಏನೂ ಕಾಣದಂತೆ ದಟ್ಟವಾದ ಮಂಜು ಮುಸುಕಿರಬಹುದು. ಇಂತಹ ಅಪಾಯದ ಜಾಗಗಳಿಂದ, ಪರಿಸ್ಥಿತಿಯಿಂದ ನೌಕೆ-ನಾವಿಕರ ರಕ್ಷಣೆ ಸಾಧ್ಯವಾಗುವುದು ದೀಪಸ್ಥಂಭಗಳಿಂದ.
ಅಪಾಯದ ಮುನ್ಸೂಚನೆ ನೀಡಿ ನಾವಿಕರನ್ನು ಎಚ್ಚರಿಸುವುದು ಹಾಗೂ ನೌಕೆಗಳಿಗೆ ದಾರಿ ತೋರಿಸುವುದು ದೀಪಗೋಪುರಗಳ ಉದ್ದೇಶ ಈ ಕಾರಣದಿಂದ ದೀಪಗೋಪುರ ಹಾಗೂ ಅದರ ಪ್ರಖಾರವಾದ ಬೆಳಕಿನ ಕಿರಣಗಳು ಸಾಗರದಲ್ಲಿ ಹೆಚ್ಚು ಕಂಡಷ್ಟು ಒಳ್ಳೆಯದು. ದೀಪಗೋಪುರವನ್ನು ನಿರ್ಮಿಸುವ ಮೊದಲು ಸಮುದ್ರದಲ್ಲಿ ಎಷ್ಟು ದೂರಕ್ಕೆ ಬೆಳಕು ಕಾಣಿಸಬೇಕು ಎಂಬುವುದನ್ನು ನಿರ್ಧರಿಸುತ್ತಾರೆ. ಉದಾಹರಣೆಗೆ ದೀಪಗೋಪುರ ನೀರಿನಿಂದ 60 ಅಡಿಗಳ ಎತ್ತರದಲ್ಲಿದ್ದರೆ ಶುಭ್ರವಾದ ಹವೆಯಲಿ ಸುಮಾರು 9 ಮೈಲಿಗಳ ದೂರದಿಂದ ನೋಡಬಹುದು. ನೆಲದ ಮೇಲೆ ಕಟ್ಟುವ ದೀಪಗೋಪುರ ಎತ್ತರವಾಗಿದ್ದಷ್ಟು ಒಳ್ಳೆಯದು. ಆದರೆ ಎತ್ತರವಾದ ಬಂಡೆ ಬೆಟ್ಟಗಳ ಮೇಲೆ ಕಟ್ಟುವ ದೀಪಗೋಪುರಗಳು ಎತ್ತರವಿಲ್ಲದಿದ್ದರೂ ಹೆಚ್ಚು ದೂರಕ್ಕೆ ಕಾಣಿಸುತ್ತವೆ.

ದೀಪಸ್ತಂಭದ ಅತಿ ಮುಖ್ಯವಾದ ಭಾಗವೆಂದರೆ ಅದರ ಬೆಳಕು ಬೀರುವ ವ್ಯವಸ್ಥೆ. ದೀಪಗೋಪುರ ಬೆಳಕು, ಸಾಗರದಲ್ಲಿ ಹೆಚ್ಚು ದೂರ ಕಾಣಲು ದೀಪ ಹಾಗೂ ಗೋಪುರದ ಎತ್ತರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸಿ ಹೊರಗೆ ಕಳುಹಿಸುವ ವ್ಯವಸ್ಥೆ. ಕಟ್ಟಿಗೆ, ಕಲ್ಲಿದ್ದಲು, ತೈಲ ಅನಿಲ, ವಿದ್ಯುತ್, ಇದು ದೀಪಗೋಪುರದ ದೀಪಗಳು ಬೆಳಗುವ ದಿಶೆಯಲ್ಲಿ ನಡೆದು ಬಂದ ದಾರಿ. ಕಟ್ಟಿಗೆ ಕಲ್ಲಿದ್ದಲುಗಳಿಂದ ಹೊಗೆಯ ಸಮಸ್ಯೆ, ದೀಪದ ಸುತ್ತಲಿನ ಗಾಜೆಲ್ಲಾ ಕಪ್ಪು, ಬರುವ ಬೆಳಕು ಅನಿಶ್ಚಿತ. ದಟ್ಟವಾದ ಮಂಜಿನಲ್ಲಿ ಕಾಣುವ ದೂರ ಕಡಿಮೆ.

ದೀಪಗೋಪುರದಿಂದ ಹೊರಡುವ ಬೆಳಕಿನ ಕಿರಣಗಳನ್ನು ಸಾಮಾನ್ಯವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸುತ್ತಾರೆ. ಸ್ಪುರಿಸುವ ಬೆಳಕು, ಕ್ರಮವಾದ ಅಂತರದಲ್ಲಿ ಕಾಣದಂತೆ ಮರೆಯಾಗುವ ಬೆಳಕು, ಸ್ಥಿರವಾದ ಬೆಳಕು ಮತ್ತು ವ್ಯತ್ಯಾಸದ ಬೆಳಕು.
ಸ್ಪುರಿಸುವ ಬೆಳಕಿನಲ್ಲಿ ಎಷ್ಟು ಕಾಲ ನೀವು ಬೆಳಕನ್ನು ನೋಡುತ್ತೀರಾ ಅದಕ್ಕಿಂತ ಹೆಚ್ಚು ಕಾಲ ಅದು ಕಾಣುವುದಿಲ್ಲ. ಎರಡನೆಯದು ಇದರ ವಿರುದ್ಧ ಬೆಳಕು ಎಷ್ಟು ಕಾಲ ನಿಮಗೆ ಕಾಣುತ್ತದೋ ಅದಕ್ಕಿಂತ ಕಡಿಮೆಯ ಸಮಯದಷ್ಟು ಕಾಣಿಸುವುದಿಲ್ಲ. ಸ್ಥಿರ ಬೆಳಕಿನಲ್ಲಿ ದೀಪ ಆರುವುದೇ ಇಲ್ಲ. ಸಮ ವ್ಯತ್ಯಾಸ ಬೆಳಕಿನಲ್ಲಿ ಎಷ್ಟು ಕಾಲ ಬೆಳಕು ಕಾಣುತ್ತದೋ, ಅಷ್ಟೇ ಸಮಯ ಕಾಣಿಸುವುದಿಲ್ಲ. ಈ ಬೆಳಕಿನ ವ್ಯತ್ಯಾಸ ಮಾಡುವುದರಿಂದ ನಾವಿಕರು ಈ ದೀಪಗೋಪುರ ಯಾವುದು? ಯಾವ ದೇಶದ ಯಾವ ಭಾಗದಲ್ಲಿದೆ? ಎಂಬುವುದನ್ನು ಕಂಡುಕೊಳ್ಳುತ್ತಾರೆ.ಇದರಿಂದ ಎಂತಹ ಚಂಡಮಾರುತ , ಅಲ್ಲೋಲ-ಕಲ್ಲೋಲ ಪರಿಸ್ಥಿತಿಯಿರಲೀ ನಾವಿಕರು ಸಾಮಾನ್ಯವಾಗಿ ದಾರಿ ತಪ್ಪುವುದಿಲ್ಲ ಹೀಗೆ ಕಗ್ಗತ್ತಲ ರಾತ್ರಿಯಲ್ಲಿ ಪ್ರಕ್ಷುಬ್ಧ ಸಾಗರದಲ್ಲಿ ದಾರಿಕಾಣದೆ ತೊಳಲಾಡುತ್ತಿರುವ ನಾವಿಕರನ್ನು ತನ್ನ ಬಿಳಿಯ ಕಿರಣಗಳಿಂದ ಮುಟ್ಟಿ ಎಚ್ಚರಿಸಿ ಸಂತೈಸಿ ದಾರಿ ತೋರಿಸುವ ದೀಪ ಗೋಪುರ, ನಾವಿಕರ ಪಾಲಿಗೆ ನಿಜಕ್ಕೂ ಆಪದ್ಬಾಂಧವ.
-ಪುರುಷೋತ್ತಮ

