ಬಂಟ್ವಾಳ: ಸರಕಾರಿ ಶಾಲೆ ನಮ್ಮ ಶಾಲೆ ಎನ್ನುವ ಮನೋಭಾವ ಊರಿನ ನಾಗರಿಕರಲ್ಲಿ ಮೂಡಬೇಕು. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕೈ ಜೋಡಿಸಿದಾಗ ಸರ್ಕಾರಿ ಶಾಲೆಗಳು ಮುಚ್ಚಲು ಸಾಧ್ಯವೇ ಇಲ್ಲ ಎಂದು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಶ್ರೀ ಗಣೇಶೋತ್ಸವದ ಪ್ರಯುಕ್ತ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವಠಾರದಲ್ಲಿ ನಡೆದ 9 ನೇ ವರ್ಷದ ಆಟೋಟ ಸ್ಪರ್ಧೆಗಳ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಡ್ಡಲಕಾಡು ಸರ್ಕಾರಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಇಚ್ಛೆಯಿಂದ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷದಿಂದ ಸಾಧಕರಿಗೆ ಪ್ರಶಸ್ತಿ ನೀಡಲು ನಿರ್ದರಿಸಲಾಗಿದ್ದು ಪತ್ರಕರ್ತ ಸಂದೀಪ್ ಸಾಲ್ಯಾನ್ ಹಾಗೂ ಸಂಚಾರಿ ಠಾಣಾ ಎಸೈ ಚಂದ್ರಶೇಖರಯ್ಯನವರಿಗೆ “ಕರೆಂಕಿ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜೆಸಿಐ ಕಾರ್ಯದರ್ಶಿ ಡಾ. ಬಾಲಕೃಷ್ಣ ಅಗ್ರಬೈಲು, ಪಂಜಿಕಲ್ಲು ಗ್ರಾ.ಪಂ. ಪಂಚಾಯಿತಿ ಸದಸ್ಯರಾದ ಪೂವಪ್ಪ ಮೆಂಡನ್, ರೂಪ, ಹಿಂದೂ ಯುವಸೇನೆಯ ಶಿವಪ್ರಸಾದ್, ಪ್ರಮುಖರಾದ ಧರ್ಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಲಬ್‍ನ ಪದಾಧಿಕಾರಿಗಳಾದ ನವಿನ್ ಸೇಸಗುರಿ, ವಿನೋದ್ ಕುಮಾರ್, ವಿಠಲ ಡಿ., ಶೇಖರ ಅಂಚನ್, ಗಣೇಶ್ ಗೌಡ ಕರೆಂಕಿ, ಸೀತಾರಾಮ, ರಾಮಚಂದ್ರ ಪೂಜಾರಿ, ಗಣೇಶ್ ಮಣಿ, ನಾಗೇಶ್ ದಡ್ಡಲಕಾಡು, ಬಾಲಕೃಷ್ಣ ಗೌಡ, ತಿರುಮಲೇಶ್ ಕುಲಾಲ್ ಹಾಜರಿದ್ದರು.
ಸಾಮೂಹಿಕ ಪ್ರಾರ್ಥನೆ:
ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಬಗ್ಗೆ ಅವಹೇಳಕಾರಿ ನಿಂದಿಸಿದ ವ್ಯಕ್ತಿಯನ್ನು ಶಿಕ್ಷಿಸುವಂತೆ ಬೆಳಿಗ್ಗೆ ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ಸಾಮಾಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

