ಬಂಟ್ವಾಳ: ಗ್ರಾಮ ಸಭೆ, ಗ್ರಾಮ ಪಂಚಾಯತ್‍ನಲ್ಲಿ ದಾಖಲಾದ ನಿರ್ಣಯದಂತೆ ರೂಪಿಸಿದ ಕ್ರಿಯಾ ಯೋಜನೆಗೆ ಸರಕಾರ ಅನುದಾನ ಒದಗಿಸಿದಾಗ ಗ್ರಾಮದ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಸಜೀಪನಡು ಗ್ರಾಮ ಪಂಚಾಯತ್‍ನ ವಠಾರದಲ್ಲಿ ನಡೆದ ಸಜೀಪನಡು ಪಂಚಾಯತ್ ಗ್ರಾಮೋತ್ಸವ-2016ನ್ನು ಸಸಿಗೆ ನೀರು ಹೊಯ್ಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯಕ್ಕೆ ಮುಖ್ಯಮಂತ್ರಿ, ಜಿಲ್ಲೆಗೆ ಜಿಪಂ ಅಧ್ಯಕ್ಷ, ತಾಲೂಕಿಗೆ ತಾಪಂ ಅಧ್ಯಕ್ಷ, ಗ್ರಾಮ ಪಂಚಾಯತ್‍ಗೆ ಗ್ರಾಪಂ ಅಧ್ಯಕ್ಷರೇ ಮುಖ್ಯಮಂತ್ರಿಯಾಗಿದ್ದಾರೆ. ಗ್ರಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ಹೊಸ ಯೋಚನೆ, ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದ ಅವರು, ಗ್ರಾಮೋತ್ಸವ ಗ್ರಾಮದ ಜನರ ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ ಎಂದರು.
ಅವಿಭಜಿತ ಜಿಲ್ಲೆಯ ಪಂಚಾಯತ್‍ಗಳ ಹಬ್ಬವನ್ನು ಮುಂದಿನ ಸೆಪ್ಟಂಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲೆಯ ಕೋಟಾ ಪಂಚಾಯತ್‍ನಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯ ವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಅದರಂತೆ ಹಿಂದುಳಿದ, ಬಡವ, ಕೂಲಿ ಕಾರ್ಮಿಕರಿಗೂ ಪಂಚಾಯತ್ ಸದಸ್ಯರಾಗುವ ಅವಕಾಶ ದೊರೆತಿದೆ ಎಂದರು.
ಇದೇ ವೇಳೆ ಪಂಚಾಯತ್ ವ್ಯಾಪ್ತಿಯಲ್ಲಿ 2014-15, 2015-16ರ ಸಾಲಿನಲ್ಲಿ ಬಿಡುಗಡೆಯಾದ 3.20 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿವೃತ್ತ ಪೊಲೀಸ್ ಅಧಿಕಾರಿ, ಸ್ಥಳೀಯ ಹಿರಿಯರಾದ ಕೆ.ಮುಹಮ್ಮದ್ ಉದ್ಘಾಟಿಸಿದರು. ಪಂಚಾಯತ್‍ನ ಸಾಧನೆಯ ವಿವರವನ್ನು ಜಿಪಂ ಸದಸ್ಯ ರವೀಂದ್ರ ಕಂಬಳಿ ಅವರು ಅನಾವರಣಗೊಳಿಸಿ ಗ್ರಾಮದ ಅಭಿವೃದ್ಧಿಯಲ್ಲಿ ತಾನು ಈ ಭಾಗದ ಜನಪ್ರತಿನಿಧಿಯಾಗಿ ಪಂಚಾಯತ್‍ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

1
ಪಂಚಾಯತ್‍ನ ವಾರ್ಷಿಕ ಸಂಚಿಕೆಯನ್ನು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಇದೇ ವೇಳೆ ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಪಂಚಾಯತ್‍ನ ಮಾಜಿ ಅಧ್ಯಕ್ಷೆ ಖೈರುನ್ನಿಸಾ ಅವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಅಧ್ಯಕ್ಷ ಸಜೀಪ ಮುಹಮ್ಮದ್ ನಾಸೀರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ತಾನು ಈವರೆಗೆ ಯಾವುದೇ ರಾಜಕಾರಣ ಮಾಡಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ತನ್ನದೇ ಆದ ಹಲವಾರು ಕಲ್ಪನೆಗಳನ್ನು ಹೊಂದಿದ್ದು ಮಾದರಿ ಪಂಚಾಯತ್ ಆಗಿ ರೂಪಿಸಲು ಎಲ್ಲರ ಸಹಕಾರ ಕೋರಿದರು.
ಪಂಚಾಯತ್ ಉಪಾಧ್ಯಕ್ಷೆ ಸುನಿತಾ ಶಾಂತಿ ಮೋರಸ್, ಸದಸ್ಯರಾದ ಅಬ್ದುಲ್ ರಹಿಮಾನ್ ಎಸ್.ಎನ್., ಸುರೇಶ್ ಬಂಗೇರಾ, ಅಬ್ದುಲ್ ರಶೀದ್, ವಿಮಲಾ, ಮುಮ್ತಾಝ್, ಬೀಫಾತುಮ್ಮ, ಬಿ.ಕೆ.ನಸೀಮ, ಬಂಟ್ವಾಳ ಪುರಸಭಾ ಸದಸ್ಯ ಇಕ್ಬಾಲ್ ಗೂಡಿನಬಳಿ ಮೊದಲಾದವರು ವೇದಿಕೆಯಲ್ಲಿದ್ದರು. ಪಂಚಾಯತ್ ಸದಸ್ಯ ಇಕ್ಬಾಲ್ ಬೈಲಗುತ್ತು ಸ್ವಾಗತಿಸಿದರು. ಪಿಡಿಒ ವೀರಪ್ಪ ಗೌಡ ವಂಧಿಸಿದರು. ಅಶ್ರಫ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಕಾಂಗ್ರೆಸ್ ಗೈರು

ಸಜೀಪನಡು ಗ್ರಾಮ ಪಂಚಾಯತ್‍ನ ಗ್ರಾಮೋತ್ಸವ ಕಾರ್ಯಕ್ರಮಕ್ಕೆ ಸಚಿವ ಯು.ಟಿ.ಖಾದರ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯೆ ಮಮತಾ ಗಟ್ಟಿ, ತಾಪಂ ಸದಸ್ಯೆ ಸವಿತ ಸಹಿತ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷರುಗಳು ಹಾಗೂ ಸ್ಥಳೀಯ ಕಾರ್ಯಕರ್ತರು ಕೂಡಾ ಗೈರು ಹಾಜರಾಗಿದ್ದರು.

ಗ್ರಾಮದ ಉತ್ಸವವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಸಚಿವ ಖಾದರ್‍ಯಾದಿಯಾಗಿ ಕಾಂಗ್ರೆಸಿಗರು ಪಾಲ್ಗೊಳ್ಳದಿರುವುದಿರುವುದಕ್ಕೆ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಅವರು ಖೇದ ವ್ಯಕ್ತಪಡಿಸಿದರು. ಗ್ರಾಮದ ಅಭಿವೃದ್ಧಿಗೆ ಅನುದಾನ ಒದಗಿಸಿದ ಸಚಿವ ಯು.ಟಿ.ಖಾದರ್, ಜಿಪಂ ಸದಸ್ಯೆ ಮಮತಾ ಗಟ್ಟಿ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದರು.
ಬಹುಭಾಷಾ ಕವಿಗೋಷ್ಠಿ: ಗ್ರಾಮೋತ್ಸವವನ್ನು ವಿನೂತನವಾಗಿ ಆಯೋಜಿಸಿದ ಪಂಚಾಯತ್ ಆಡಳಿತ ಮಧ್ಯಾಹ್ನದ ಭೋಜನದ ಬಳಿಕ ಬಹು ಭಾಷಾ ಕವಿ ಮುಹಮ್ಮದ್ ಅಡ್ಡೂರು ಅವರ ಅಧ್ಯಕ್ಷತೆಯಲ್ಲಿ ಬಹು ಭಾಷಾ ಕವಿಗೋಷ್ಠಿ ನಡೆಯಿತು. ಕವಿ ಗೋಷ್ಠಿಯನ್ನು ಕನ್ನಡ ಸಾಹಿತ್ಯ ಪರಿಷತ್‍ನ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು. ಮದರಂಗಿ ಪತ್ರಿಕೆಯ ಪ್ರಕಾಶಕ ಡಿ.ಐ.ಅಬೂಬಕ್ಕರ್ ಕೈರಂಗಳ ಉಪಸ್ಥಿತರಿದ್ದರು. ಕವಿಗಳಾದ ದಯಾನಂದ್ ಕತ್ತಲ್‍ಸಾರ್(ತುಳು), ರೂಪಕಲಾ ಆಳ್ವ(ತುಳು), ಬಶೀರ್ ಕಿನ್ಯ(ಬ್ಯಾರಿ), ಮಹೇಂದ್ರನಾಥ್ ಸಾಲೆತ್ತೂರು(ಕನ್ನಡ), ದೇವಿಕಾ ನಾಗೇಶ್(ತುಳು), ಎಡ್ವರ್ಡ್ ರೇಡಿಯೊ ಸಾರಂಗ್(ಕೊಂಕಣಿ), ರಾಜಾರಾಮ್ ವರ್ಮ ವಿಟ್ಲ(ಕನ್ನಡ), ಶಂಸೀರ್ ಬುಡೊಳಿ(ಕನ್ನಡ), ಶಾಹುಲ್ ಹಮೀದ್ ತುಂಬೆ(ಬ್ಯಾರಿ), ಶಮೀಮ್ ಕುಟ್ಟಿಕ್ಕಳ(ಬ್ಯಾರಿ), ಮುಆದ್ ಗೋಳ್ತಮಜಲು(ಬ್ಯಾರಿ) ಕವನ ವಾಚಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *