ಬಂಟ್ವಾಳ: ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪೂರೈಸಲು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಬದ್ದರಾಗಿದ್ದು, ಮಾನಸಿಕ ಹಾಗೂ ದೈಹಿಕ ಕ್ಷಮತೆಯ ದೃಷ್ಟಿಯಿಂದ ಮಕ್ಕಳ ಈಜು ತರಬೇತಿಗೆ ಹೆತ್ತವರು ಹೆಚ್ಚಿನ ಒತ್ತು ನೀಡಬೇಕೆಂದು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ ಶೆಟ್ಟಿ ಹೇಳಿದ್ದಾರೆ.
ಶಾಲೆಯಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಪೋಷಕರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶಾಲೆ ಕಳೆದ 11 ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸುತ್ತಾ ಮುನ್ನಡೆಯುತ್ತಿದ್ದು, ಮಕ್ಕಳನ್ನು ಆಟೋಟ ಹಾಗೂ ಸಾಂಸ್ಕ್ರತಿಕವಾಗಿಯೂ ತರಬೇತುಗೊಳಿಸುವ ಚಟುವಟಿಕೆಗಳು ಶಾಲೆಯಲ್ಲಿ ನಡೆಯುತ್ತಿದೆ ಎಂದರು. ಮುಂದಿನ ಮೂರು ತಿಂಗಳ ಒಳಗಾಗಿ ಶಾಲೆಯಲ್ಲಿ ಸುಸಜ್ಜಿತ ಸಭಾಂಗಣನಿರ್ಮಾಣಗೊಳ್ಳಲಿದೆ ಎಂದ ಅವರು, ಮಕ್ಕಳ ಪೋಷಕರೂ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳತ್ತ ನಿರಂತರ ಗಮನಹರಿಸುವಂತೆ ಕರೆ ನೀಡಿದರು. ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 5 ರಿಂದ 9 ನೇ ತರಗತಿಯ ಒಬ್ಬೊಬ್ಬ ವಿದ್ಯಾರ್ಥಿಗೆ ಮುಂದಿನ ವರ್ಷದಿಂದ ಉಚಿತ ಶಿಕ್ಷಣ ನೀಡುವ ಕುರಿತಾಗಿಯೂ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದವರು ಸಭೆಗೆ ತಿಳಿಸಿದರು.
ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ಮಾತನಾಡಿ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾವಾಹನಗಳ ಬಗ್ಗೆ ಗಮನಹರಿಸಬೇಕು, ಅಪರಿಚಿತರ ಜೊತೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದು ಕಿವಿಮಾತು ಹೇಳಿದರಲ್ಲದೆ, ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ತಿಳಿಸಿದರು. ಉತ್ತಮ ಬೋಧನೆ ನಿರ್ವಹಿಸಬಲ್ಲ ಶ್ರಮಜೀವಿ ಶಿಕ್ಷಕರು ಶಾಲೆಯಲ್ಲಿದ್ದು, ಸಂಸ್ಕøತಿಯ ಅರಿವು ಮೂಡಿಸುವ ಯೋಗ, ಭರತನಾಟ್ಯ,ಸಂಗೀತ, ಯಕ್ಷಗಾನ ಹಾಗೂ ಕರಾಟೆ ತರಬೇತಿಗೆ ಶಾಲೆಯಲ್ಲಿ ಒತ್ತು ನೀಡಲಾಗಿದೆ ಎಂದವರು ವಿವರಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ರವರು ಮಾತನಾಡಿ, ಮಕ್ಕಳ ಕಲಿಕಾಮಟ್ಟ ಸುಧಾರಣೆಯಲ್ಲಿ ಶಿಕ್ಷಕರಷ್ಟೇ ಜವಬ್ದಾರಿ ಪೋಷಕರಿಗೂ ಇದೆ ಎಂದರಲ್ಲದೆ, ಕಲಿಕಾ ಹಂತದಲ್ಲಿ ಯಾವುದೇ ರೀತಿಯ ಧಾರ್ಮಿಕ ಬೇಧಭಾವದ ಮನೋಭಾವ ಬಾರದೆ ಮಕ್ಕಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಿಸುವಂತಾಗಬೇಕೆಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಟೀಚರ್, ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಬಿ.ಎಸ್.ನಾೈಕ್, ಉಪಾಧ್ಕಕ್ಷ ಅಪ್ರಾಯ ಪೈ, ಕಾರ್ಯದರ್ಶಿ ನಾರಾಯಣ ಶೆಟ್ಟಿ, ಮುಖ್ಯ ಶಿಕ್ಷಕರಾದ ವಿಜಯಲಕ್ಷ್ಮೀ ವಿ.ಶೆಟ್ಟಿ, ಗ್ರೇಸ್ ಪಿ ಸಲ್ದಾನ ಉಪಸ್ಥಿತರಿದ್ದರು. ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ಎಸ್.ಮೋಹನ್ ವರದಿ ಮಂಡಿಸಿದರು. ಪೋಷಕರ ಪರವಾಗಿ ಆಶಿತಾ ಎಸ್‍ಶೆಟ್ಟಿ ಮಾತನಾಡಿದರು. ಲಕ್ಷ್ಮೀ ಟೀಚರ್ ಪ್ರಾರ್ಥಿಸಿದರು. ಕಸ್ತೂರಿ ಪಿ.ಶೆಟ್ಟಿ ಸ್ವಾಗತಿಸಿ, ಶಿಕ್ಷಕ ರಾಮಚಂದ್ರ ವಂದಿಸಿದರು. ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನಿಯಾದ ಆದಿತ್ಯ ನ್ನು ಸನ್ಮಾನಿಸಲಾಯಿತು. ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

