ಬಂಟ್ವಾಳ :ಇತ್ತೀಚೆಗೆ ನಿಧನ ಹೊಂದಿದ ತೆಂಕು-ಬಡಗುತಿಟ್ಟುಗಳ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಅರ್ಥದಾರಿ,ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರಿಗೆ ಪುಂಜಾಲಕಟ್ಟೆ ಸ್ವಸ್ತಿಕ್ಫ್ರೆಂಡ್ಸ್ ಕ್ಲಬ್,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಯಕ್ಷಗಾನ ಸಂಘದ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಶ್ರೀ ಮುರುಘೇಂದ್ರ ಸಭಾಂಗಣದಲ್ಲಿ ಜು.10ರಂದು ಸಂಜೆ ಜರಗಿತು.ಹಿರಿಯ ಯಕ್ಷಗಾನ ಅರ್ಥದಾರಿ ರಮೇಶ್ ಪ್ರಭು ಮೂರ್ಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ನುಡಿನಮನ ಸಲ್ಲಿಸಿ ಮಾತನಾಡಿ ಯಕ್ಷಗಾನದ ಮೇಲೆ ಜನರಿಗೆ ಆಸಕ್ತಿ,ಸದಭಿರುಚಿ ಮೂಡಿಸುವಲ್ಲಿ ಯಶಸ್ವಿಯಾದವರು ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರು.ಕಲಾವಿದರಲ್ಲಿ ಗುಣಗ್ರಾಹಿತ್ವ ಅವರ ವಿಶಿಷ್ಟ ಗುಣವಾಗಿತ್ತು.ಅವರ ಪಾತ್ರ ಪೋಷಣೆ,ಪ್ರಸಂಗ ರಚನೆ ಮುಂದಿನ ಪೀಳಿಗೆಗೆ ಅನುಕರಣೀಯವಾಗಿದೆ ಎಂದು ಹೇಳಿದರು.

ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ ದೇಶ,ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರ ಕಲಾ ಪ್ರೌಢಿಮೆ ಅಳಿಸಲಾರದ ಸಂಪತ್ತು.ಅವರು ಅಮೂಲ್ಯವಾದ ಕಲಾ ಸಂಪತ್ತನ್ನು ಸಮಾಜಕ್ಕೆ ನೀಡಿದ್ದಾರೆ.ಅವರು ಸ್ಮರಣೀಯರು ಎಂದು ಹೇಳಿದರು.ವಾಮದಪದವು ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ,ಉದ್ಯಮಿ ವಿಜಯ ರೈ ಆಲದಪದವು,ಯಕ್ಷಗಾನ ಸಂಘದ ಸದಸ್ಯರಾದ ಪಿ.ಕೆ.ಟೈಲರ್,ಸೂರ್ಯ ನಾರಾಯಣ ಭಟ್,ಸುರೇಶ್ ಶೆಟ್ಟಿ,ಪಿಲಾತಬೆಟ್ಟು ವ್ಯ.ಸೇ.ಸ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ,ಮಂಗಳೂರು ಜನತಾ ಬಜಾರ್ನಿರ್ದೇಶಕ ಪುರುಷೋತ್ತಮ ಶೆಟ್ಟಿ,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ತುಳುನಾಡ ರಕ್ಷಣಾವೇದಿಕೆ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್,ರಾಜೇಂದ್ರ ಕೆ.ವಿ.,ರಾಜೇಶ್ ಪಿ,ಗಣೇಶ್,ವೆಂಕಟೇಶ್ ಮೂರ್ಜೆ ಮತ್ತಿತರರು ಉಪಸ್ಥಿತರಿದ್ದರು.
ಪಿ.ಎಂ.ಪ್ರಭಾಕರ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.
