ಬಂಟ್ವಾಳ: (ಜೂ.7 )ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಪರಿಸರದಲ್ಲಿ ಗರಿಷ್ಟ ಮಂದಿ ಕುಡಿಯುವ ನೀರಿನ ಬಿಲ್ಲು ಪಾವತಿಸದಿರುವ ಬಗ್ಗೆ ವಸೂಲಿ ಮಾಡಲು ಕಟ್ಟುನಿಟ್ಟು ಮತ್ತು ನಿರ್ದಾಕ್ಷಿ ಣ್ಯ ಕ್ರಮ ಕೈಗೊಳ್ಳಲು ಕಳೆದ ಜೂ.27ರಂದು ನಡೆದ ಗ್ರಾಮಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷರು ಸಹಿತ ಸರ್ವ ಸದಸ್ಯರು ನಿರ್ಣಯ ಕೈಗೊಂಡಿದ್ದರು ಎಂದು ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಸಮರ್ಥಿಸಿಕೊಂಡಿದ್ದಾರೆ.

ಬಿ.ಸಿ.ರೋಡ್ ಹೋಟೆಲೊಂದರಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದರು. ಪಂಪ್ ಹೌಸ್ ಗೆ ಬೀಗ ಜಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳೀಯ ನಾಗರಿಕರು ಪಂಚಾಯಿತಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇವರು ಪತ್ರಿಕಾಗೋಷ್ಠಿ ಮೂಲಕ ಉತ್ತರಿಸಿದ್ದಾರೆ.
ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 1,009 ಮಂದಿ ಕುಡಿಯುವ ನೀರಿನ ಸಂಪರ್ಕ ಪಡೆದಿದ್ದು, ಒಟ್ಟು 30 ಪಂಪ್ಹೌಸ್ಗೆ 15 ಮಂದಿ ಪಂಪ್ ಅಪರೇಟರ್ ಸಿಬ್ಬಂದಿ ಇದ್ದಾರೆ.
ಇಲ್ಲಿನ ರಾಯಿ, ಕೊಯಿಲ, ಅರಳ ಈ ಮೂರು ಗ್ರಾಮಗಳಿಗೆ ಸಂಬಂಧಿಸಿದಂತೆ ಪ್ರತೀ ತಿಂಗಳಿಗೆ ರೂ 75,675 ರಂತೆ ವಾಷರ್ಿಕ ರೂ 9,08,100 ಮೊತ್ತ ಸಂಗ್ರಹವಾಗಬೇಕಿದೆ. ಈ ಪೈಕಿ ರೂ.9,06,375ರಷ್ಟು ಕುಡಿಯುವ ನೀರಿನ ಬಿಲ್ಲು ಹಳೆ ಬಾಕಿಯಾಗಿ ಉಳಿದಿದೆ ಎಂದು ಅವರು ವಿವರಿಸಿದರು.
ಗ್ರಾಮಸಭೆ ನಿರ್ಣಯದಂತೆ ಈಗಾಗಲೇ ಹಳೆ ಬಾಕಿ ವಸೂಲಿಗೆ ನೋಟೀಸು ವಿತರಣೆ, ಮೈಕ್ ಪ್ರಚಾರ ಕೈಗೊಂಡಿದ್ದು, ಹೊಸ ಮೀಟರ್ ಅಳವಡಿಕೆಗೆ ಸೂಚಿಸಲಾಗಿದೆ. ಕೈತ್ರೋಡಿ ಪರಿಸರದಲ್ಲಿ ಪ್ರತಿದಿನ ಕುಡಿಯುವ ನೀರು ಪೂರೈಕೆಗೆ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿರುವ ಬಾರ್ಜರ್ ಕೈತ್ರೋಡಿ ಪೈಪ್ಲೈನ್ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಬೇಡಿಕೆ:
ಇಲ್ಲಿನ ಮೂರು ಗ್ರಾಮಗಳಿಗೂ ತಲಾ 25ಸಾವಿರ ಲೀ.ಸಾಮಥ್ರ್ಯ ಹೊಂದಿರುವ ಪ್ರತ್ಯೇಕ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಅನುದಾನ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಗ್ರಾ.ಪಂ.ಉಪಾಧ್ಯಕ್ಷ ಆನಂದ ಪೂಜಾರಿ ಮಾತನಾಡಿ, ಕಳೆದ ಗ್ರಾಮಸಭೆಯಲ್ಲಿ ಪಂಪ್ ಹೌಸ್ ಗೆ ಬೀಗ ಜಡಿಯಲು ನಿರ್ಣಯ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಗ್ರಾ.ಪಂ.ಸದಸ್ಯರಾದ ಆಶ್ರಫ್ ಮುಲ್ಲಾರಪಟ್ನ, ಹನೀಫ್, ಲೆಕ್ಕಸಹಾಯಕಿ ವಾಯ್ಲೆಟ್ ಮಿನೇಜಸ್ ಉಪಸ್ಥಿತರಿದ್ದರು.
