ಬಂಟ್ವಾಳ; ಮಾನವನ ಸ್ವಾರ್ಥ ಮನೋಭಾವನೆಯಿಂದಾಗಿ ಇಂದು ಭೂಮಿತಾಯಿ ಜಲಹೀನತೆಯಂತಾ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಹೇಳಿದರು.
ಅವರು ಭಾನುವಾರ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಯುವವೇದಿಕೆ ಸಂಘಟನೆಯ ನೇತೃತ್ವದಲ್ಲಿ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಾದ ಇಂಗುಗುಂಡಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಗತ್ತಿನ ಶೇ,97 ರಷ್ಟು ನೀರು ಉಪ್ಪಿನ ಅಂಶದಿಂದ ಕೂಡಿದ್ದು, ಕುಡಿಯಲು ಯೋಗ್ಯವಾದ ನೀರಿನ ಪ್ರಮಾಣ ತೀರಾ ಕಡಿಮೆ. ಈ ಎಚ್ಚರ ನಮ್ಮೆಲ್ಲರಲ್ಲೂ ಬೇಕು ಎಂದ ಅವರು, ಕೆರೆಗಳ ನಾಶ, ಮರಗಳ ಮಾರಣಹೋಮ, ಅತಿಯಾದ ಪ್ಲಾಸ್ಟಿಕ್ ಬಳಕೆ, ಮಿತಿಮೀರಿದ ಬೋರ್‍ವೆಲ್ ಗಳ ಮೂಲಕ ಭೂಮಿ ತಾಯಿಯ ಮೇಲೆ ದೌರ್ಜನ್ಯವೆಸಗಿ ಅಂತರ್ಜಲ ಮಟ್ಟ ಕಡಿಮೆಯಾಗಲು ನಾವು ನೀವು ಕಾರಣರಾಗಿದ್ದು, ಸದ್ಯಕ್ಕೆ ಇದಕ್ಕೆ ಇಂಗುಗುಂಡಿಯೊಂದೇ ಪ್ರಾಯಶ್ಚಿತ್ಯ ಎಂದರು. ಊರ ಯುವಕರೇ ಮುಂದಾಗಿ ಗ್ರಾಮದಲ್ಲಿ ಇಂಗುಗುಂಡಿ ಅಭಿಯಾನದ ಮೂಲಕ ಜಲಸಾಕ್ಷರತೆಯ ಎಚ್ಚರ ಮೂಡಿಸು ಹೊರಟಿರುವುದು ರಾಜ್ಯಕ್ಕೇ ಮಾದರಿಯಾದ ಕಾರ್ಯ ಎಂದು ಶ್ಲಾಘಿಸಿದರು.

ಪೆರಾಜೆ ಯುವ ವೇದಿಕೆಯ ಸಂಚಾಲಕ ರಾಜಾರಾಮ್ ಕಾಡೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ವೇದಿಕೆ ಪೆರಾಜೆ ಗ್ರಾಮದ ಉದ್ಯೋಗಸ್ಥ ಯುವಕರ ಬಳಗವಾಗಿದ್ದು, ಗ್ರಾಮದ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿದೆ. ಅಂತರ್ಜಲ ಮಟ್ಟವನ್ನು ಏರಿಸುವ ಚಿಕ್ಕ ಪ್ರಯತ್ನದ ಭಾಗವಾಗಿ ಈ ಆಂದೋಲನವನ್ನು ನಡೆಸುತ್ತಿದೆ ಎಂದರು. ಪ್ರತೀ ಭಾನುವಾರಗಳಲ್ಲಿ ಹಿಟಾಚಿ ಯಂತ್ರದ ನೆರವು ಪಡೆದುಕೊಂಡು ಗ್ರಾಮದಲ್ಲಿ ಸುಮಾರು 300 ರಷ್ಟು ಇಂಗುಗುಂಡಿಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದೇವೆ ಎಂದವರು ವಿವರಿಸಿದರು.
ವೇದಿಕೆಯ ಅಧ್ಯಕ್ಷ ಅಜಿತ್ ಗೌಡ ಬುಡೋಳಿ, ಕಾರ್ಯದರ್ಶಿ ಯತಿರಾಜ್ ಮಿತ್ತಪೆರಾಜೆ, ಉಪಾಧ್ಯಕ್ಷರಾದ ಸತೀಶ್ ಮಿತ್ತೂರು, ಪ್ರಶಾಂತ್, ರಾಧಾಕೃಷ್ಣ, ಕೋಶಾಧಿಕಾರಿ ಬಾಲಕೃಷ್ಣ ಮಿತ್ತಪೆರಾಜೆ, ಸಂಘಟನಾ ಕಾರ್ಯದರ್ಶಿಗಳಾದ ವಿನೀತ್, ಸಂಂಪರ್ಕ ಪ್ರಮುಖ್ ನಿತಿನ್ ಅರ್ಬಿ, ಜನಾರ್ಧನ ಮಿತ್ತಕೋಡಿ, ಸಂದೀಪ್ ಮಿತ್ತಪೆರಾಜೆ, ಸಂದೇಶ್ ಮಿತ್ತಪೆರಾಜೆ ಮತ್ತು ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಭಾನುವಾರ ದಿನವಿಡೀ ನಡೆದ ಕಾರ್ಯದಲ್ಲಿ ಗ್ರಾಮದಲ್ಲಿ 95 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದ್ದು, ಮುಂದಿನ ಭಾನುವಾರ ಇಂಗುಗುಂಡಿ ನಿರ್ಮಾಣ ಕಾರ್ಯ ಮುಂದುವರಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಅಜಿತ್ ಗೌಡ ತಿಳಿಸಿದ್ದಾರೆ. ಕಾರ್ಯದರ್ಶಿ ಯತಿರಾಜ್ ಮಿತ್ತಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.
