ನವದೆಹಲಿ: ಹಂಸರಾಜ್ ಭಾರದ್ವಾಜ್ ಅವರ ಅವಧಿ ಮುಗಿದ ಕಾರಣ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವುದರಿಂದ ದೇಶದ ನಾನಾ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಲು ಸರಕಾರ ಮುಂದಾಗಿದೆ. ಅದರಂತೆ ಕರ್ನಾಟಕದ ರಾಜ್ಯಪಾಲ ಹುದ್ದೆಯನ್ನು ಬಿಜೆಪಿ ಪಕ್ಷದ ಹಾಗೂ ಒಂದು ಕಾಲದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರ ಪಾಲಾಗಲಿದೆ ಎಂಬ ಗುಸುಗುಸು ಕೇಳಿಬರಲಾರಂಭಿಸಿದೆ.
ಈಗಾಗಲೇ ಈ ಬಗ್ಗೆ ಗೃಹ ಇಲಾಖೆಗೆ ಅಂತಿಮ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ್ದು ನಾಳೆ ಸ್ಪಷ್ಟ ಸುಳಿವು ಹೊರಬೀಳಲಿದೆ. ಮೂಲಗಳ ಪ್ರಕಾರ, ಕೇಂದ್ರದಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಹಿರಿಯ ಬಿಜೆಪಿ ಮುಖಂಡರಿಗೆ ರಾಜ್ಯಪಾಲರ ಹುದ್ದೆ ನೀಡುವ ಚಿಂತನೆ ಇದೆ. ಜಸ್ವಂತ್ ಸಿಂಗ್ ಒಂದು ವೇಳೆ ಭಾರತೀಯ ಜನತಾ ಪಕ್ಷಕ್ಕೆ ಮರಳಿದರೆ ಅವರನ್ನ ತಮಿಳುನಾಡಿನ ರಾಜ್ಯಪಾಲರನ್ನಾಗಿ ಮಾಡುವ ಸಾಧ್ಯತೆ ಇದೆ. ಯಶವಂತ್ ಸಿನ್ಹಾ, ಲಾಲ್’ಜೀ ಟಂಡನ್, ವಿ.ಕೆ.ಮಲ್ಹೋತ್ರಾ ಮೊದಲಾದ ಮುಖಂಡರ ಹೆಸರು ರಾಜ್ಯಪಾಲರ ಪಟ್ಟಿಯಲ್ಲಿವೆ ಎನ್ನಲಾಗಿದೆ.

