ಬಡಗಬೆಳ್ಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದಲ್ಲಿ ಮಲ್ಯರವರ ಯು.ಬಿ.ಗ್ರೂಫ್ ಅಂತರ್ಜಲ ಅಭಿವೃದ್ಧಿ ಯೋಜನೆಯೊಂದನ್ನು ಅನುಷ್ಠಾನಗೊಳಿಸುತ್ತಿದ್ದು ಪರಿಸರದ ನಿವಾಸಿಗಳ ನೀರಿನ ಕೊರತೆಯನ್ನು ನಿವಾರಿಸುವಲ್ಲಿ ವರದಾನವಾಗಿ ಪರಿಣಮಿಸಲಿದೆ. ಬಡಗಬೆಳ್ಳೂರು ಗ್ರಾಮ ಪಂಚಾಯತಿಯ ಅನುಮತಿ, ಸಹಕಾರದೊಂದಿಗೆ ಯೋಜನೆಯು ಆರಂಭಗೊಂಡಿದ್ದು ಚೆನ್ನೈಯ ಕೆಆರ್ಜಿ ರೈನ್ ವಾಟರ್ ಫೌಂಡೇಶನ್ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿದೆ..ಬೆಂಗಳೂರಿನ ವೃತ್ತಿ ಜೀವನೋಪಾಯ ಸಂಪನ್ಮೂಲ ಕೇಂದ್ರ ಯೋಜನೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದ್ದು ಬಡಗಬೆಳ್ಳೂರು ಅಂತರ್ಜಲ ಅಭಿವೃದ್ಧಿ ಯೋಜನಾ ಸಮಿತಿ ಮೇಲುಸ್ತುವಾರಿಯನ್ನು ನಿರ್ವಹಿಸುತ್ತಿದೆ. ಪರಿಸರದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನವಾಗಲಿರುವ ಈ ಯೋಜನೆಗೆ ಗ್ರಾಮಸ್ಥರು, ಕೃಷಿಕರು, ರೈತರು ಹಾಗೂ ಸಂಘಟನೆಗಳಿಂದ ಸಲಹೆ, ಸಹಕಾರ ದೊರೆಯುತ್ತಿದೆ..

3 (2)

5
ಯು.ಬಿ.ಗ್ರೂಫ್ ತಮ್ಮ ಉತ್ಪನ್ನಗಳಿಗೆ ಉಪಯೋಗಿಸುವುದು ಈ ನೆಲದ ನೀರನ್ನೇ. ಮತ್ತೆ ಕಂಪನಿ ಈ ನೆಲದ ನಿವಾಸಿಗಳಿಗೆ ಜಲವನ್ನೊದಗಿಸಬೇಕು. ಅದಕ್ಕಾಗಿ ಸಂಸ್ಥೆಯು ಸಿಎಸ್ಅರ್ (ಸಾಮೂದಾಯಿಕ ಜವಾಬ್ದಾರಿ) ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯತು ಸನಿಹದಲ್ಲೇ ಹರಿಯುತ್ತಿರುವ ತೋಡನ್ನು ಇದಕ್ಕಾಗಿ ಆಯ್ಕೆ ಮಾಡಿ ಈಗಾಗಲೇ ಕಾಮಗಾರಿಯನ್ನು ಆರಂಭಿಸಲಾಗಿದೆ.
ತೆಂಕಬೆಳ್ಳೂರು ಗ್ರಾಮದಿಂದ ಆರಂಭಗೊಂಡು ಪಲ್ಗುಣಿ ನದಿ ಸೇರುವ ಸುಮಾರು 5 ಕಿ.ಮಿ.ಉದ್ಧದ ಈ ತೋಡಿನ ಸುತ್ತಮುತ್ತೆಲ್ಲಾ ಹಚ್ಚಹಸಿರ ಪರಿಸರ. ಹೊಲಗದ್ದೆಗಳು, ಬಾಳೆ ತೆಂಗು ಅಡಿಕೆ ತೋಟಗಳಿರುವ ಸುಂದರ ವಾತಾವರಣ. ಸಂಸ್ಥೆಯು ಈ ಯೋಜನೆಗಾಗಿ ನಾನಾ ಕಡೆಗಳಲ್ಲಿ ಸರ್ವೆ ಮಾಡಿದಾಗ ಕೊನೆಗೂ ಸೂಕ್ತವಾಗಿ ಕಂಡದ್ದು ಬಡಗಬೆಳ್ಳೂರಿನ ಈ ಪರಿಸರ.

ಹಿಂದೆಲ್ಲಾ ನೀರ ಹರಿವನ್ನು ತುಂಬಿಸಿಕೊಂಡು ಕೃಷಿ ಭೂಮಿಗೆ ನೀರೊದಗಿಸುತ್ತಿದ್ದ ಈ ತೋಡಿನಲ್ಲಿ ಇತ್ತೀಚೆಗೆ ಕೆಲ ವರ್ಷದಿಂದ ಡಿಸೆಂಬರ್ ತಿಂಗಳಲ್ಲೇ ನೀರ ಹರಿವು ನಿಂತಿತ್ತು. ಇದರಿಂದಾಗಿ ಬಾವಿ, ಬೋರ್ವೆಲ್,ಕೃಷಿ ಭೂಮಿಯಲ್ಲಿಯೂ ನೀರಿನ ಕೊರತೆ ಉಂಟಾಗಿ ಜನತೆ ಕಷ್ಟ ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಯು.ಬಿ.ಗ್ರೂಫ್, ಕೆಆರ್ಜಿ, ವೃತ್ತಿ ಜೀವನೋಪಾಯ ಸಂಪನ್ಮೂಲ ಕೇಂದ್ರ, ಬಡಗಬೆಳ್ಳೂರು ಅಂತರ್ಜಲ ಅಭಿವೃದ್ದಿ ಯೋಜನಾ ಸಮಿತಿ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಈ ಅಂತರ್ಜಲ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಈಗಾಗಲೇ ಮಣ್ಣು, ಕಸಕಡ್ಡಿ, ಪೊದರುಗಳಿಂದ ತುಂಬಿರುವ ತೋಡನ್ನು ಕ್ಲೀನ್ ಮಾಡಿ ಸುಮಾರು ನಾಲ್ಕು ಮೀಟರ್ ಆಳದವರೆಗೆ ಅಗೆದು ಇಕ್ಕೆಲ್ಲಗಳಲ್ಲಿ ಕಾಂಕ್ರೀಟ್ ಹಾಕಿ, ತೋಡಿನುದ್ದಕ್ಕೂ ಮೂರು ಡ್ಯಾಂಗಳನ್ನು ಕಟ್ಟಿ ನೀರನ್ನು ಇಂಗಿಸುವ ಕಾರ್ಯ ಮಾಡಲಾಗುತ್ತಿದೆ. ಸುಮಾರು 2ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು ಶೀರ್ಘದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಯೋಜನೆ ಪೂರ್ಣಗೊಂಡ ನಂತರದ ದಿನಗಳಲ್ಲಿ ತೋಡಿನಲ್ಲಿ ಮಾರ್ಚ್ ತನಕವೂ ನೀರು ಇರುವ ಸಾಧ್ಯತೆ ಇದ್ದು ಈ ಮೂಲಕ ಪರಿಸರ ಜನತೆಯ ಕುಡಿಯುವ ನೀರಿನ ಸಮಸ್ಯೆ, ಕೃಷಿಕರ ನೀರಿನ ಕೊರತೆ ದೂರವಾಗಬೇಕೆನ್ನುವುದು ಯೋಜನೆಯ ಮುಂದಿರುವ ಸದುದ್ಧೇಶವಾಗಿದೆ.

ನಮ್ಮ ಗ್ರಾಮಕ್ಕೆ ಯು.ಬಿ.ಸಂಸ್ಥೆಯವರು ಈ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಪರಿಸರದ ಸಾಕಷ್ಟು ಕುಟುಂಬಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಕೆಆರ್ಜಿ, ವೃತ್ತಿ ಜೀವನೋಪಾಯ ಸಂಪನ್ಮೂಲ ಕೇಂದ್ರ, ಬಡಗಬೆಳ್ಳೂರು ಅಂತರ್ಜಲ ಅಭಿವೃದ್ದಿ ಯೋಜನಾ ಸಮಿತಿ, ಗ್ರಾಮ ಪಂಚಾಯತು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಬಡಗಬೆಳ್ಳೂರು ಅಂತರ್ಜಲ ಅಭಿವೃದ್ದಿ ಯೋಜನಾ ಸಮಿತಿ ಅಧ್ಯಕ್ಷ ಕಿಶೋರ್ ಭಂಡಾರಿ ಬೆಳ್ಳೂರು ತಿಳಿಸಿದ್ದಾರೆ. ಗ್ರಾಮ ಪಂಚಾಯತು ಸದಸ್ಯ ವಸಂತ ಅಂಚನ್, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಅವರು ತಿಳಿಸಿದರು.

By Suddi9

Leave a Reply

Your email address will not be published. Required fields are marked *