ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಮಾರ್ನಬೈಲು ಸಮೀಪದ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಾನುವಾರ ಇದೇ ಪ್ರಥಮ ಬಾರಿಗೆ ಗರಿಷ್ಟ ಎಂಬಂತೆ ಒಟ್ಟು 5,466 ಅಗೇಲು ಸೇವೆ ನಡೆಯುವ ಮೂಲಕ ಕಳೆದ ತಿಂಗಳು ಮೇ.29ರಂದು ನಡೆದ ಗರಿಷ್ಟ 4,238 ಅಗೇಲು ಸೇವೆ ದಾಖಲೆಯನ್ನು ಮತ್ತೆ ಮುರಿದಿದೆ.

ಪ್ರತೀ ತಿಂಗಳ ಅಮಾವಾಸ್ಯೆ ಹೊರತುಪಡಿಸಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ ಇಲ್ಲಿ ದೈವಕ್ಕೆ ಅಗೇಲು ಸೇವೆ ಸಲ್ಲಿಕೆಯಾಗುತ್ತಿದೆ. ಪ್ರತೀ ವರ್ಷ ಶಾಲಾ ಕಾಲೇಜು ಆರಂಭ, ಶೈಕ್ಷಣಿಕ ಫಲಿತಾಂಶ ಮತ್ತು ಬೆಂಗಳೂರು, ಮುಂಬೈ ಮತ್ತಿತರ ಕಡೆಗಳಿಂದ ರಜೆಯಲ್ಲಿ ಊರಿಗೆ ಬಂದಿದ್ದ ಭಕ್ತರು ವಾಪಾಸಾಗುವ ವೇಳೆ ಇಲ್ಲಿಗೆ ಆಗಮಿಸಿ ಅಗೇಲು ಸೇವೆ ನೀಡಿ ಅಪಾರ ಪ್ರಮಾಣದಲ್ಲಿ ಮಲ್ಲಿಗೆ ಹೂವು ಮತ್ತು ಚಿನ್ನಾಭರಣ ಹರಿಕೆ ರೂಪದಲ್ಲಿ ಸಲ್ಲಿಸುತ್ತಿದ್ದಾರೆ.
ಇದರಿಂದಾಗಿ ಏಕಾಯೇಕಿ 1,230 ಹೆಚ್ಚುವರಿ ಅಗೇಲು ಸೇವೆ ಏರಿಕೆಯಾಗಲು ಕಾರಣ ಎಂದು ಹೇಳಲಾಗಿದೆ. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಮಧ್ಯಾಹ್ನದಿಂದ ರಾತ್ರಿ ತನಕವೂ ಅಗೇಲು ಸೇವೆ ಪಡೆಯಲು ನೂಕು ನುಗ್ಗಲು ಮತ್ತಿತರ ಅವ್ಯವಸ್ಥೆಯಿಂದ ಪರದಾಡುವಂತಾಗಿದೆ. ಇದೇ ವೇಳೆ ಸುದ್ದಿ ತಿಳಿದು ಬಂದ ಬಂಟ್ವಾಳ ನಗರ ಠಾಣೆಯ ಕೇವಲ ಇಬ್ಬರು ಪೊಲೀಸರು ಅಸಹಾಯಕರಂತೆ ನಿಂತಿದ್ದರು ಎಂದು ಭಕ್ತರು ಆರೋಪಿಸಿದ್ದಾರೆ.
ವಿವಿಧ ಸೌಲಭ್ಯಕ್ಕೆ ಆಗ್ರಹ:
ಧಾರ್ಮಿಕ ದತ್ತಿ ಇಲಾಖೆಗೆ ತಾಲ್ಲೂಕಿನಲ್ಲೇ ಗರಿಷ್ಟ ಮೊತ್ತದ ಆದಾಯ ತಂದು ಕೊಡುವ ಈ ದೈವಸ್ಥಾನದಲ್ಲಿ ಭಕ್ತರಿಗೆ ಸರತಿ ಸಾಲಿನಲ್ಲಿ ನಿಲ್ಲಲು ಸೂಕ್ತ ಸ್ಥಳಾವಕಾಶ ಕೊರತೆ ಇದೆ. ಈಗಾಗಲೇ ದೈವಸ್ಥಾನ ಹೊರಾಂಗಣಕ್ಕೆ ತಗಡು ಶೀಟು ಅಳವಡಿಕೆ, ವಿಸ್ತೃತ ಶೌಚಾಲಯ ನಿರ್ಮಾಣ, ಕುಡಿಯುವ ನೀರು, ಕಾಂಕ್ರೀಟು ರಸ್ತೆ ಮತ್ತಿತರ ಮೂಲ ಸೌಕರ್ಯ ಒದಗಿಸಿದ್ದರೂ ಅಗೇಲು ಪ್ರಸಾದ ಪಡೆಯುವುದಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಲು ತಡೆಬೇಲಿ ಅಥವಾ ಆಧಾರಸ್ತಂಭ ಅಳವಡಿಸಿಲ್ಲ. ಬೆಳಿಗ್ಗೆ ಅಗೇಲು ಸೇವೆ ಸಲ್ಲಿಸಿದ ಭಕ್ತರು ಬಳಿಕ ಅಗೇಲು ಪ್ರಸಾದ ಪಡೆಯಲು ಸಂಜೆ ತನಕ ಇಲ್ಲಿ ಕಾಯಬೇಕಿದೆ. ಇದರಿಂದಾಗಿ ದೂರದ ಊರಿನ ಭಕ್ತರು ಸಹಿತ ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರಿಗೆ ತಂಗಲು ವಿಶ್ರಾಂತಿಗೃಹ ನಿರ್ಮಿಸಬೇಕು.
ಇನ್ನೊಂದೆಡೆ ಭಕ್ತಿಯಿಂದ ದೈವಕ್ಕೆ ಅಗೇಲು ಸೇವೆ ಸಲ್ಲಿಸಿದ ಭಕ್ತರಿಗೆ ಮಧ್ಯಾಹ್ನ ಪೂಜೆ ಬಳಿಕ ಸೂಕ್ತ ಸಮಯದಲ್ಲಿ ಅನ್ನಪ್ರಸಾದ ನೀಡುವ ವ್ಯವಸ್ಥೆ ಆರಂಭಿಸಬೇಕು.
ಇನ್ನೊಂದೆಡೆ ಇಲ್ಲಿಗೆ ಕೇವಲ ಹಿಂದೂ ಭಕ್ತರು ಮಾತ್ರವಲ್ಲದೆ ದೈವದ ಕಾರಣಿಕ ಬಗ್ಗೆ ಅರಿವು ಹೊಂದಿರುವ ಅನ್ಯ ಧರ್ಮಿ ಯಭಕ್ತರು ಕೂಡಾ ಆಗಮಿಸಿ ದೈವಕ್ಕೆ ಹರಿಕೆ ಸಲ್ಲಿಸುತ್ತಿದ್ದಾರೆ.
ಇಲ್ಲಿನ ಕಲ್ಲುರ್ಟಿ ದೈವಕ್ಕೆ ಕೋಲ ಸೇವೆ ಸಲ್ಲಿಸಲು ಭಕ್ತರು ರೂ 3ಸಾವಿರ ಮೊತ್ತ ಮುಂಗಡ ಪಾವತಿಸಿ ಕಳೆದ 10 ವರ್ಷದಿಂದ ಕಾಯುತ್ತಿದ್ದಾರೆ. ಇದೀಗ ಕಳೆದ 2003ರಲ್ಲಿ ಹೆಸರು ನೊಂದಾಯಿಸಿದ ಭಕ್ತರ ಕೋಲ ಸೇವೆ ನಡೆಯುತ್ತಿದೆ.
ಧಾರ್ಮಿಕ ದತ್ತಿ ಇಲಾಖೆಯು ಪೊಳಲಿ ದೇವಸ್ಥಾನಗಳ ಜವಾಬ್ದಾರಿ ಹೊಂದಿರುವ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಅವರೆ ನೋಡಿಕೊಳ್ಳುತ್ತಾರೆ. -ಮೋಹನ್ ಕೆ.ಶ್ರೀಯಾನ್ ರಾಯಿ

