ಬ್ರಹ್ಮರಕೂಟ್ಲು: ತಾಲ್ಲೂಕಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಕೆಳಗಿನ ಬ್ರಹ್ಮಗುಡಿ ಸರ್ವೆಸ್ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬಗೊಂಡ ಪರಿಣಾಮ ಪ್ರಥಮ ಮಳೆಗೆ ಸಂಪೂರ್ಣ ಕೆಸರುಮಯಗೊಂಡಿದೆ.
ಈ ಸರ್ವೆಸ್ ರಸ್ತೆ ಏರಿಸಲು ಹೆದ್ದಾರಿ ಇಲಾಖೆ ಗುತ್ತಿಗೆದಾರರ ಮೂಲಕ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಣ್ಣು ತುಂಬಿಸಿ ಬಳಿಕ ಕಾಮಗಾರಿ ಸ್ಥಗಿತಗೊಳಿಸಿತ್ತು.

ಇದೀಗ ಮಳೆಯಾಗುತ್ತಿದ್ದಂತೆಯೇ ಈ ಸರ್ವೆಸ್ ರಸ್ತೆಯಲ್ಲಿ ಇಲ್ಲಿನ ಶಾಲಾ ಮಕ್ಕಳು, ವಿವಿಧೆಡೆ ಉದ್ಯೋಗಕ್ಕೆ ತೆರಳುವವರು, ಮಹಿಳೆಯರು, ವಯೋವೃದ್ದರು ಕೆಸರಿನ ನಡುವೆ ನಡೆಯಲಾಗದೆ ಸುತ್ತು ಬಳಸಿ ಇನ್ನೊಂದು ದಾರಿ ಹುಡುಕಾಡುವ ಸ್ಥಿತಿ ಉದ್ಭವಗೊಂಡಿದೆ. ಪ್ರತೀ ಸಂಕ್ರಮಣ ಮತ್ತಿತರ ಸಂದರ್ಭದಲ್ಲಿ ಇಲ್ಲಿನ ಕಾರಣಿಕ ಪ್ರಸಿದ್ಧ ಬ್ರಹ್ಮಗುಡಿಗೆ ತೆರಳುವ ಅಪಾರ ಮಂದಿ ಭಕ್ತರು ಈ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಇದರಿಂದಾಗಿ ವಾಹನ ಸಂಚಾರವಂತೂ ಅನಿಯಮಿತ ನಿರ್ಬಂಧ ವಿಧಿಸಿದಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಇದೇ ರಸ್ತೆಯ ಇನ್ನೊಂದು ಬದಿ ಇರುವ ಮಸೀದಿ ಬಳಿ ಮಾತ್ರ ರಸ್ತೆ ಕಾಂಕ್ರಟೀಕೃತ ತಡೆಗೋಡೆ ನಿರ್ಮಿಸಲಾಗಿದೆ.
ಈ ಬಗ್ಗೆ ಸಾಕಷ್ಟು ಬಾರಿ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
