ಬಂಟ್ವಾಳ: ಬೆರಳೆಣಿಕೆಯ ಮಕ್ಕಳಿದ್ದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನೂರಕ್ಕಿಂತಲೂ ಅಧಿಕ ಮಕ್ಕಳ ಸೇರ್ಪಡೆಗೊಂಡಿರುವುದು ರಾಜ್ಯದಲ್ಲಿಯೇ ಕ್ರಾಂತಿಕಾರಿ ಬೆಳವಣಿಗೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘನೆ ವ್ಯಕ್ತ ಪಡಿಸಿದರು.
ಇಲ್ಲಿನ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಶ್ರೀಗಂಧದ ಗಿಡವನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ ಮಕ್ಕಳ ಕೊರತೆಯನ್ನು ಎದುರಿಸುತ್ತಿರುವ 2 ಸಾವಿರ ಶಾಲೆಗಳನ್ನು ಮುಚ್ಚಲು ಸರ್ಕಾರ ತೀರ್ಮಾನ ಮಾಡಿದೆ. ಆದರೆ ಇಲ್ಲಿನ ಸರ್ಕಾರಿ ಶಾಲೆಯನ್ನ ದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತು ಪಡೆದುಕೊಂಡು ಮಾದರಿ ಶಾಲೆಯನ್ನಾಗಿ ರೂಪಿಸಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ, ಅಂಗನವಾಡಿ ಮಾದರಿಯಲ್ಲಿಯೇ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭ ಮಾಡಲಾಗಿದೆ, ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗಿದೆ ಈ ಮೂಲಕ ಕಾಂತ್ರಿಕಾರಿ ಹೆಜ್ಜೆಯನ್ನಿಟ್ಟುಕೊಂಡು ಶಾಲೆ ಮುಂದುವರಿಯುತ್ತಿದೆ ಎಂದರು.

ಶಾಲೆಗಳಲ್ಲಿ ವ್ಯವಸ್ಥಿತವಾದ ಆಡಳಿತ ಕೊಡುವ ಕಲ್ಪನೆಗಳಿದ್ದಾರೆ ಮಕ್ಕಳ ಹೆತ್ತವರು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಮಾನಸಿಕವಾಗಿ ಸಿದ್ದರಾಗುತ್ತಾರೆ ಎನ್ನುವುದುಕ್ಕೆ ದಡ್ಡಲಕಾಡು ಶಾಲೆ ನಿದರ್ಶನ, ಈ ಸಂದೇಶವನ್ನು ಸಚಿವರಿಗೆ, ಸರ್ಕಾ ರಕ್ಕೆ ಶಾಸನ ಸಭೆಯಲ್ಲಿ ಮನದಟ್ಟು ಮಾಡುತ್ತೇನೆ, ಈ ಶಾಲೆಯ ಸಮಗ್ರ ಅಭಿವೃದ್ದಿಗೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸಲು ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ನನ್ನಿಂದಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದರು.
ಶ್ರೀ ದುರ್ಗ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ಐತಪ್ಪ, ವೇದಿಕೆಯಲ್ಲಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮೌರಿಸ್ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಗೋಪಾಲ, ಉಮಾವತಿ ಹಾಗೂ ದುರ್ಗಾ ಫ್ರೆಂಡ್ಸ್ ಕ್ಲಬ್ನ ಸದಸ್ಯರು ಹಾಜರಿದ್ದರು.
