ಬಂಟ್ವಾಳ: ಕಳೆದ 10 ದಿನಗಳ ಹಿಂದೆ ತಾಲೂಕಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ನಷ್ಟಕ್ಕೊಳಗಾದ ಸಂತ್ರಸ್ತರು ಪ್ರತಿಭಟನೆ ನಡೆಸುವ ಮೂಲಕ ಸರಕಾರದಿಂದ ದೊರಕುವ ಪರಿಹಾರ ಚೆಕನ್ನು ಪಡೆದುಕೊಂಡ ವಿದ್ಯಾಮಾನ ಶುಕ್ರವಾರ ಬಂಟ್ವಾಳದಲ್ಲಿ ನಡೆದಿದೆ.
ಮೇ 17ರಂದು ಬೀಸಿದ ಸುಂಟರಗಾಳಿಗೆ ತಾಲೂಕಿನಲ್ಲಿ ಸುಮಾರು 500ಕ್ಕೂ ಮಿಕ್ಕಿ ಮನೆಗಳು ಹಾನಿಗೊಳಗಾಗಿದ್ದು ಈ ಪೈಕಿ ಕೆಲವು ಸಂತ್ರಸ್ತರಿಗೆ ಎರಡು ಹಂತಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಪರಿಹಾರ ಚೆಕನ್ನು ವಿತರಿಸಿದ್ದರು. ತಾಲೂಕಿನ ಬಿ.ಕಸ್ಬ, ನಾವೂರು, ಪಂಜಿಕಲ್ಲು ಗ್ರಾಮದ ಕೆಲ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಲು ಸಚಿವರ ಸೂಚನೆಯ ಮೇರೆಗೆ ಮೇ 31ರಂದು ದಿನಾಂಕವನ್ನು ತಾಲೂಕಾಡಳಿತ ನಿಗದಿಪಡಿಸಿತ್ತು. ಆದರೆ, ಮಳೆ ಬರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹಾನಿಗೊಳಗಾದ ಮನೆಯ ದುರಸ್ಥಿಗಾಗಿ ಅರ್ಜಿ ಸಲ್ಲಿಸಿದ್ದ ಸಂತ್ರಸ್ತರು ಪರಿಹಾರದ ಚೆಕ್ ಗಾಗಿ ಕಳೆದ ಮೂರು ದಿನಗಳಿಂದ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದರೂ ತಾಲೂಕಾಡಳಿತ ಸಂತ್ರಸ್ತರಿಗೆ ಚೆಕ್ ವಿತರಿಸಲು ಮೀನಮೇಷ ಎಣಿಸಿದೆ ಎಂದು ಆರೋಪಿಸಲಾಗಿದೆ.

ತಾಲೂಕು ಕಚೇರಿಗೆ ಮುತ್ತಿಗೆ: ಬಿ.ಕಸ್ಬಾ, ನಾವೂರ ಗ್ರಾಮದ ನೂರಾರು ಸಂತ್ರಸ್ತರು ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡರ ಸಾಥ್ ನೊಂದಿಗೆ ತಾಲೂಕು ಕಚೇರಿಗೆ ನುಗ್ಗಿ ತಹಶೀಲ್ದಾರರ ಕೊಠಡಿಯೊಳಗೆ ಧರಣಿ ಕುಳಿತರು. ‘ಒಂದೋ ಚೆಕ್ ಕೊಡಿ, ಇಲ್ಲವೇ ನಾವು ಕೊಟ್ಟ ಅರ್ಜಿ ಯನ್ನಾದರೂ ವಾಪಸ್ ಕೊಡಿ. ನಾವು ಸಾರ್ವಜನಿಕರಲ್ಲಿ ದೇಣಿಗೆ ಸಂಗ್ರಹಿಸಿ ಮನೆ ದುರಸ್ಥಿ ಮಾಡುತ್ತೇವೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಜಪ್ಪಯ್ಯ ಎನ್ನದ ತಹಶೀಲ್ದಾರರು ಈಗಾಗಲೇ ಚೆಕ್ ವಿತರಣೆಗೆ ಸಚಿವರು ದಿನ ನಿಗದಿ ಮಾಡಿದ್ದಾರೆ. ಅದುವರೆಗೆ ಕಾಯುವಂತೆ ಸಂತ್ರಸ್ತರಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಪ್ರತಿಭಟನಕಾರರು ಒಪ್ಪಲಿಲ್ಲ.
ಸ್ಪಂದಿಸದ ಡಿಸಿ: ಈ ಹಂತದಲ್ಲಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಇಬ್ರಾಹೀಂ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಸ್ತುಸ್ಥಿತಿಯನ್ನು ವಿವರಿಸಿದರು. ಆದರೆ ಜಿಲ್ಲಾಧಿಕಾರಿಯವರಿಂದ ಇದಕ್ಕೆ ಸೂಕ್ತವಾದ ಸ್ಪಂದನ ದೊರೆಯಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಕಾರರು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದರು. ಪರಿಹಾರದ ಹಣವನ್ನು ಯಾರು ಕೂಡಾ ಅವರ ಕಿಸೆಯಿಂದ ಕೊಡುವುದಲ್ಲ. ತಮ್ಮ ತೆರಿಗೆಯ ಹಣವನ್ನೇ ಸರಕಾರ ನೀಡುತ್ತಿದೆ. ಅದನ್ನು ನೀಡುವಲ್ಲಿ ರಾಜಕೀಯ ಮಾಡುವುದು ಖಂಡನೀಯವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
ದೌಡಾಯಿಸಿದ ತಹಶೀಲ್ದಾರ್: ಪ್ರತಿಭಟನೆ ತೀವ್ರಗೊಳ್ಳುವ ಸೂಚನೆಯನ್ನರಿತ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಕಚೇರಿಯಿಂದ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕಚೇರಿಗೆ ದೌಡಾಯಿಸಿದರು. ಅವರ ಆಪ್ತ ಕಾರ್ಯದರ್ಶಿಯ ಮೂಲಕ ಸಚಿವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿದರು. ಸಂಜೆ 4 ಗಂಟೆಗೆ ಸಚಿವರ ಕಚೇರಿಯಲ್ಲಿ ಖುದ್ದು ಸಚಿವರೇ ವಿತರಿಸಲಾಗುತ್ತದೆ ಎಂಬ ಸಂದೇಶದೊಂದಿಗೆ ತಮ್ಮ ಕಚೇರಿಗೆ ಆಗಮಿಸಿ ಪ್ರತಿಭಟನಕಾರರ ಮುಂದೆ ಇದನ್ನು ಪ್ರಕಟಿಸಿದಂತೆ ಪ್ರತಿಭಟನಕಾರರು ತಮ್ಮ ಪ್ರತಿಭಟನೆ ವಾಪಸ್ ಪಡೆದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರ.ಕಾರ್ಯದರ್ಶಿಗಳಾದ ರಾಮ್ದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ನಾವೂರ ಪಂಚಾಯತ್ ಸದಸ್ಯ ಸದಾನಂದ ನಾವೂರ, ಎಪಿಎಂಸಿ ಸದಸ್ಯ ರೊನಾಲ್ಡ್ ಡಿಸೋಜ ಅಮ್ಟಾಡಿ ಮೊದಲಾದವರು ಉಪಸ್ಥಿತರಿದ್ದರು.
