ಬಂಟ್ವಾಳ: ಸುಂಕ ಪಾವತಿಸುವ ವಿಚಾರಕ್ಕೆ ಸಂಬಂಧಿಸಿ ಟೋಲ್ಗೇಟ್ನ ಸಿಬ್ಬಂದಿಗಳು ಕಾರು ಚಾಲಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಶನಿವಾರ ಬೆಳಿಗ್ಗೆ ಬ್ರಹ್ಮರಕೂಟ್ಲುವಿನ ಟೋಲ್ಪ್ಲಾಝಾದಲ್ಲಿ ನಡೆದಿದೆ.
ತಾಲೂಕಿನ ಗೋಲ್ತಮಜಲು ಗ್ರಾಮದ ಮಾಣಿಮಜಲು ನಿವಾಸಿ ಮಹಮ್ಮದ್ ರಫೀಕ್ ಹಲ್ಲೆಗೊಳಗಾಗಿದ್ದು ಟೋಲ್ಗೇಟ್ ಸಿಬ್ಬಮದಿಗಳಾದ ಸಂತೋಷ್ ಮತ್ತು ಕಾಶಿನಾಥ್ ಹಲ್ಲೆ ನಡೆಸಿದ ಆರೋಪಿಗಳು ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 11.45ರ ಸುಮಾರಿಗೆ ಮಹಮ್ಮದ್ ರಫೀಕ್ ಕೆಲಸ ನಿಮಿತ್ತ ಸಫ್ವಾನ್ ಎಂಬವರ ಜೊತೆ ಬಿ.ಸಿ.ರೋಡಿನಿಂದ ಮಂಗಳೂರು ಕಡೆಗೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬ್ರಹ್ಮರಕೂಟ್ಲು ಟೋಲ್ ಬಳಿ ಸರತಿ ಸಾಲಿನಲ್ಲಿ ಸಂಚರಿಸುತ್ತಿದ್ದು ಮುಂಗಡ ಟೋಲ್ ಪಾವತಿಸಿದ ರಶೀದಿಯನ್ನು ತೋರಿಸುವ ಮೊದಲೇ ಆರೋಪಿಗಳು ಕತ್ತಿ, ರಾಡ್ ಹಾಗೂ ಬಿಯರ್ ಬಾಟಲ್ಗಳ ಮೂಲಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ. ಆರೋಪಿಗಳ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
