ಮೂಡಬಿದಿರೆ: ಭಾರತೀಯ ಖೋ-ಖೋ ತಂಡದಲ್ಲಿ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ದೀಕ್ಷಾ ಮಧ್ಯ ಪ್ರದೇಶದ ಇಂಡೋರ್ ಮೈದಾನದಲ್ಲಿ ನಡೆದ ಏಷಿಯನ್ ಖೋ-ಖೋ ಚಾಂಪಿಯನ್‍ಶಿಪ್‍ನ ಬಾಂಗ್ಲಾದೇಶದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕರ್ನಾಟಕ ತಂಡದಿಂದ ಭಾರತೀಯ ಖೋ ಖೋ ತಂಡಕ್ಕೆ ಆಯ್ಕೆಯಾದ ಬಳಿಕ ದೀಕ್ಷಾ ಅವರು ನವದೆಹಲಿಯಲ್ಲಿ ನಡೆದ 20 ದಿನಗಳ ಖೋ-ಖೋ ತರಬೇತಿ ಶಿಬಿರದಲ್ಲೂ ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಆರಂಭಗೊಂಡ ಏಷಿಯನ್ ಚಾಂಪಿಯನ್‍ಶಿಪ್ ಖೊ-ಖೋ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದು ಲೀಗ್ ಹಂತದಲ್ಲಿ ನೇಪಾಲ್, ಕೋರಿಯಾದೊಂದಿಗೆ ಉತ್ತಮ ಪ್ರದರ್ಶನ ನೀಡಿ ಶ್ರಿಲಾಂಕದೊಂದಿಗೆ ಸೆಮಿಫೈನಲ್‍ನಲ್ಲಿ ಜಯಗಳಿಸಿ, ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 24/19 ಅಂಕಗಳಿಂದ ಮಣಿಸಿ ಮೊದಲ ಆವೃತ್ತಿಯ ಏಷಿಯನ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಭಾರತ ತನ್ನ ಮುಡಿಗೇರಿಸಿಕೊಂಡಿತು. ಲೀಗ್ ಹಂತದಿಂದಲೂ ದೀಕ್ಷಾ ಉತ್ತಮ ಪ್ರದರ್ಶನ ನೀಡಿ ಉತ್ತಮ ಖೋ-ಖೋ ಕ್ರೀಡಾಪಟು ಎಂದೆನಿಸಿಕೊಂಡರು. ಮೂಲತಃ ಪುತ್ತೂರಿನವರಾದ ದೀಕ್ಷಾ ಅವರ ಸಾಧನೆಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ, ಕ್ರೀಡಾ ಪ್ರೋತ್ಸಾಹಕ ಡಾ.ಎಂ ಮೋಹನ ಆಳ್ವ ಪ್ರೋತ್ಸಾಹಿಸಿದ್ದಾರೆ.


