ಮೂಡುಬಿದರೆ: ತೆಂಕತಿಟ್ಟು ಯಕ್ಷಗಾನದ ಮೇರು ಕಲಾವಿದ ಮಿಜಾರು ಅಣ್ಣಪ್ಪ ತುಳುನಾಡಿನ ಹೆಮ್ಮೆ. ಯಕ್ಷಗಾನದ ಮುಖಾಂತರ ತುಳು ಭಾಷೆ ಅಣ್ಣಪ್ಪ ನೀಡಿದ ಕೊಡುಗೆ ಅಪಾರ. ಹಾಸ್ಯ ಚಕ್ರವರ್ತಿ ಮಿಜಾರು ಅಣ್ಣಪರ ಕಲಾ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು, ಅವರ ಸಾಧನೆಯನ್ನು ದಾಖಲಿಸುವ ನಿಟ್ಟಿನಿಂದ ವರ್ಷದೊಳಗೆ ಜೀವನಚರಿತ್ರೆಯನ್ನು ಪ್ರಕಟಿಸಲಾಗುವುದು ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.
ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಅವರಿಗೆ ಮಿಜಾರು ಕಿಂಡೇಲು ರಾಮಮಂದಿರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಮೂಲಕ ಅವರ ಹೆಸರನ್ನು ಶಾಶ್ವತವನ್ನಾಗಿಸುವ ಯೋಜನೆ ರೂಪಿಸಲಾಗುವುದು ಎಂದರು.

ವಿದ್ವಾಂಸ ಡಾ. ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನದಲ್ಲಿ ಅಣ್ಣಪ್ಪರದ್ದು ವೇಸ್ಟೆಜ್ ಇಲ್ಲದ ಮಾತುಗಾರಿಕೆ. ತುಳುನಾಡಿನ ಜನಜೀವನವನ್ನು ಹಾಸ್ಯ ಹಾಗೂ ವ್ಯಂಗ್ಯದ ಮೂಲಕ ನೀಡಿದ ಅಪರೂಪದ ಕಲಾವಿದ. ಅಣ್ಣಪ್ಪ ಅವರ ಅಭಿನಯ ಕೇವಲ ಹಾಸ್ಯಕ್ಕೆ ಮಾತ್ರ ಸೀಮಿತವಲ್ಲ.ಅದು ಜೀವನ ವಿಮರ್ಶೆಗೂ ನಮ್ಮನ್ನು ಒಳಪಡಿಸುವಂತದ್ದು. ತುಳು ಭಾಷಿಗರ ಹೃದಯದ ಪ್ರತಿನಿಧಿಯಾಗಿ ಮಿಜಾರು ಅಣ್ಣಪ್ಪನವರು 6 ದಶಕಗಳ ಕಲಾಜೀವನವನ್ನು ನಡೆಸಿದ್ದಾರೆ. ಇಂತಹ ಮೇರು ಕಲಾವಿದ ನಿಜಾರ್ಥದಲ್ಲಿ ಗೌರವ ಸಲ್ಲಿಸುವ ದೃಷ್ಠಿಯಿಂದ ಮಿಜಾರು ಅಣ್ಣಪ್ಪ ಹೆಸರಿನಲ್ಲಿ ಮಂಗಳೂರು ವಿವಿಯಲ್ಲಿ ಹಾಸ್ಯಸಂಗ್ರಹ ಕೇಂದ್ರ ಸ್ಥಾಪಿಸಬೇಕು. ಡಾಕ್ಟರೇಟ್ ಪದವಿ ಮಾಡಲು ಬೇಕಾದಷ್ಟು ವಿಷಯ ಅಣ್ಣಪ್ಪ ಅವರ ಕಲಾಜೀವನದಲ್ಲಿ ಸಿಗುತ್ತದೆ ಎಂದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ,ಐದು ಮೇಳಗಳ ಸಂಚಾಲಕ ಕಿಶನ್ ಹೆಗ್ಡೆ, ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾಚ್, ಒಡನಾಡಿ ಕಲಾವಿದ ಕೆ.ಎಚ್.ದಾಸಪ್ಪ ರೈ ನುಡಿನಮನ ಸಲ್ಲಿಸಿದರು. ಮಿಜಾರು ಅಣ್ಣಪ್ಪರ ಪುತ್ರ ಸದಾಶಿವ ಮಿಜಾರು ಹಾಗೂ ಕುಟುಂಬಸ್ಥರು, ಯಕ್ಷಗಾನ ಕಲಾವಿದರು, ಅಭಿಮಾನಿಗಳು ಉಪಸ್ಥಿತರಿದ್ದರು.


