ಬಂಟ್ವಾಳ: ತಾಲ್ಲೂಕಿನ ರಾಮಲ್ಕಟ್ಟೆ ಸಮೀಪದ ವಳವೂರು ಗದ್ದೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಇಲ್ಲಿನ ಐದು ಗ್ರಾಮಸ್ಥರ ವತಿಯಿಂದ ಇದೇ 27ರಂದು ಬೆಳಿಗ್ಗೆ 11ಗಂಟೆಗೆ ‘ಶ್ರೀರಾಮ ನಾಮ ತಾರಕ ಜಪಯಜ್ಞ’ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಸಲಹೆಗಾರ ತಾರನಾಥ ಕೊಟ್ಟಾರಿ ಹೇಳಿದರು.

ತಾಲ್ಲೂಕಿನ ರಾಮಲ್ಕಟ್ಟೆ ಸಮೀಪದ ವಳವೂರು ಗದ್ದೆಯಲ್ಲಿ ಶುಕ್ರವಾರ ನಡೆದ ಉಗ್ರಾಣ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿನ ತುಂಬೆ, ಪುದು, ಕಳ್ಳಿಗೆ, ಕೊಡ್ಮಾಣ್ ಮತ್ತು ಮೇರಮಜಲು ಗ್ರಾಮದಲ್ಲಿ ಒಟ್ಟು 21ದಿನಗಳಲ್ಲಿ ರಾಮತಾರಕ ಜಪ ನಡೆಸಿ, ‘ಶ್ರೀರಾಮ ಜಯರಾಮ ಜಯ ಜಯರಾಮ ಎಂದು ಒಟ್ಟು ಕೋಟಿ ನಾಮ ಜಪ ಪೂರ್ಣಗೊಳಿಸಬೇಕು. ಒಟ್ಟು 3,600 ಚದರ ಅಡಿ ವಿಸ್ತೀರ್ಣದ ಯಜ್ಞ ಮಂಟಪದಲ್ಲಿ ದಶಾವತಾರ ನೆನಪಿಸುವ 10 ಯಜ್ಞಕುಂಡಗಳಲ್ಲಿ ಒಟ್ಟು 270ಮಂದಿ ಯಜ್ಞದೀಕ್ಷಿತರಿಂದ ವೈದಿಕರಿಂದ ಯಜ್ಞ ಸಂಪನ್ನಗೊಳ್ಳಲಿದೆ. ಇದಕ್ಕಾಗಿ ಒಟ್ಟು 1,400 ಮಂದಿ ಯಜ್ಞ ಸೇವಾಕರ್ತರು, 280 ಮಂದಿ ಸ್ವಯಂ ಸೇವಕರ ಉಪಸ್ಥಿತಿಯಲ್ಲಿ ರಾಮಭಕ್ತರು ಯಜ್ಞಕ್ಕೆ ಹವಿಸ್ಸು ಸಮರ್ಪಣೆ ನಡೆಸುವರು ಎಂದು ತಿಳಿಸಿದರು.
ಅಂದು ಬೆಳಿಗ್ಗೆ 11.30ಕ್ಕೆ ಧರ್ಮಸಭೆ ನಡೆಯಲಿದ್ದು, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಆರ್ಎಸ್ಎಸ್ನ ಕುಟುಂಬ ಪ್ರಬೋಧನ್ ಪ್ರಮುಖ್ ಪುಂಡರೀಕಾಕ್ಷ ಯೋಗಾಚಾರ್ಯ ಇವರು ಶ್ರೀರಾಮ ಪಥದರ್ಶನ ಉಪನ್ಯಾಸ ನೀಡುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವ ಸಲಹೆಗಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸಮಿತಿ ಅಧ್ಯಕ್ಷ ಉಮೇಶ ಸುವರ್ಣ, ಕಾರ್ಯದರ್ಶಿ ನವೀನ್ ಕಲ್ಲಗುಡ್ಡೆ, ಕೋಶಾಧಿಕಾರಿ ಎ.ಕೆ.ಗಿರೀಶ ಶೆಟ್ಟಿ, ಸಂಚಾಲಕ ದಾಮೋದರ ನೆತ್ರಕೆರೆ ಮತ್ತಿತರರು ಇದ್ದರು.
