ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಗಾಣದಪಡ್ಪು ಎಂಬಲ್ಲಿ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಗೆ ಕಳೆದೆರಡು ದಿನಗಳ ಹಿಂದೆ ಅವೈಜ್ಞಾನಿಕವಾಗಿ ದಿಢೀರನೆ ಹಂಪ್ಸ್ ನಿರ್ಮಿಸಿರುವುದು ಇಲ್ಲಿನ ವಾಹನ ಸವಾರರು ಮತ್ತು ಸ್ಥಳೀಯ ವರ್ತಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬಂಟ್ವಾಳ- ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಧಿಕಾರದ ಗಮನಕ್ಕೆ ತಾರದೆ ಈ ಹಂಪ್ಸ್ ನಿರ್ಮಿಸಲಾಗಿದೆ. ಮಾತ್ರವಲ್ಲದೆ ಇದಕ್ಕೆ ಯಾವುದೇ ಬಣ್ಣ ಬಳಿಯದೆ ವಾಹನ ಅಪಘಾತಕ್ಕೂ ಎಡೆ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಹಲವಾರು ಬೈಕು ಮತ್ತಿತರ ದ್ವಿಚಕ್ರ ವಾಹನ ಉರುಳಿ ಬಿದ್ದು ಪುಟ್ಟ ಮಕ್ಕಳು ಸಹಿತ ಅಪಾರ ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಪುರಸಭೆ ಮತ್ತು ಸಂಚಾರಿ ಪೊಲೀಸ್ ಠಾಣೆಗೆ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇಲ್ಲಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಬಳಿ ಹಾದು ಹೋಗಿರುವ ಈ ಹೆದ್ದಾರಿಯಲ್ಲಿ ಎರಡೆರಡು ಕಡೆ ದಿಢೀರನೆ ಹಂಪ್ಸ್ ನಿರ್ಮಾಣಗೊಂಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ಇದೇ ರಸ್ತೆಯಿಂದ ಬಂಟ್ವಾಳ ಪೇಟೆಗೆ ಹೋಗುವ ರಸ್ತೆಯಲ್ಲಿ ಕೂಡಾ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಮನೆ ಬಳಿ ಎರಡೆರಡು ಹಂಪ್ಸ್ ನಿರ್ಮಿಸಿದ ಬಳಿಕ ಇಲ್ಲಿನ ವಾಹನ ಸವಾರರು ಮತ್ತು ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದು ಹಂಪ್ಸ್ ಮಾತ್ರ ಉಳಿಸಿ ಇನ್ನೊಂದನ್ನು ತರಾತುರಿಯಲ್ಲಿ ತೆರವುಗೊಳಿಸಲಾಗಿತ್ತು. ಈ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಹಂಪ್ಸ್ ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
