ಪುನರ್ ಸರ್ವೆಗೆ ಜಿಲ್ಲಾಧಿಕಾರಿ ಸೂಚನೆ
ಬಂಟ್ವಾಳ: ತಾಲ್ಲೂಕಿನ ತುಂಬೆ ಎರಡನೇ ಅಣೆಕಟ್ಟೆ ನಿರ್ಮಾಣದಿಂದ ಮುಳಗಡೆ ಭೀತಿ ಎದುರಿಸುತ್ತಿರುವ ಪ್ರದೇಶವನ್ನು ಪುನರ್ ಸರ್ವೆ ಮೂಲಕ ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಸಮರ್ಪಕ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಂಗಳೂರು ಮಹಾ ನಗರಪಾಲಿಕೆ ಇಂಜಿನಿಯರ್ ಮತ್ತಿತರ ಅಧಿಕಾರಿಗಳಿಗೆ ಬುಧವಾರ ತಾಕೀತು ಮಾಡಿದ್ದಾರೆ.
ತಾಲ್ಲೂಕಿನ ತುಂಬೆ ಎರಡನೇ ಅಣೆಕಟ್ಟೆಯಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ಸಜಿಪಮುನ್ನೂರು ಗ್ರಾಮದ ಮಾದಕಟ್ಟೆ ಪ್ರದೇಶಕ್ಕೆ ಬುಧವಾರ ಬೆಳಿಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂತ್ರಸ್ತರ ಸಭೆ ನಡೆಸಿದ ಬಳಿಕ ಅವರು ಮನಾಪ ಅಧಿಕಾರಿಗಳೊಂದಿಗೆ ಮಾತನಾಡಿದರು.
ಕಳೆದ ಹತ್ತು ವರ್ಷಗಳ ಹಿಂದೆ ತುಂಬೆಯಲ್ಲಿ 7 ಮೀಟರ್ ಎತ್ತರದ ಅಣೆಕಟ್ಟೆ ನಿರ್ಮಿಸಲು ನಿರ್ಧರಿಸಿದ ಬಳಿಕ ಅಂದು ಮನಾಪ ಅಧಿಕಾರಿಗಳು ನೀಡಿದ ಮುಳುಗಡೆ ಪ್ರದೇಶದ ವಿಸ್ತೀರ್ಣದ ವ್ಯಾಪ್ತಿ ಇದೀಗ ಭಾರೀ ವ್ಯತ್ಯಾಸ ಕಂಡು ಬಂದಿದೆ. ಈ ಬಗ್ಗೆ ರೈತರಿಗೆ ಸ್ಪಷ್ಟ ಮತ್ತು ಪಾರದರ್ಶಕ ಚಿತ್ರಣ ನೀಡುವಂತೆ ಸಂತ್ರಸ್ತರು ವಿವಿಧ ಹೋರಾಟ ಮತ್ತು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಮಾತ್ರವಲ್ಲದೆ ಮನಪಾ ಅಧಿಕಾರಿಗಳು ರೈತರಿಗೆ ತಪ್ಪು ಮಾಹಿತಿ ನೀಡುವುದರ ಜೊತೆಗೆ ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗಳಿಗೂ ಸೂಕ್ತ ಉತ್ತರಿಸುತ್ತಿಲ್ಲ ಎಂದು ಸಂತ್ರಸ್ತರು ಜಿಲ್ಲಾಧಿಕಾರಿಗೆ ದೂರಿಕೊಂಡರು.
ಈಗಾಗಲೇ ಹಲವು ಬಾರಿ ಸರ್ವೆ ಕಾರ್ಯ ನಡೆಸಲಾಗಿದ್ದು, ಪ್ರತೀ ಬಾರಿ ಸರ್ವೆ ನಡೆಸಿದಾಗ ಹಾಕುತ್ತಿರುವ ಗುರುತಿನಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಇದರಿಂದಾಗಿ ಇಲ್ಲಿನ ಅಪಾರ ಪ್ರಮಾಣದ ಕೃಷಿ ಜಮೀನು ಮತ್ತು ವಿವಿಧ ಮನೆ, ದೇವಸ್ಥಾನ, ದೈವಸ್ಥಾನ, ಮದರಸ ಮುಳಗಡೆ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇನ್ನೊಂದೆಡೆ ಇಲ್ಲಿನ ಗದ್ದೆಯಲ್ಲಿ ಮುಳುಗಡೆ ಮಾತ್ರವಲ್ಲದೆ ಒರತೆ ಉಂಟಾದಲ್ಲಿ ಕೃಷಿ ಮಾಡಲು ಅಸಾಧ್ಯವಾಗುತ್ತದೆ ಎಂದು ಸಂತ್ರಸ್ತರು ದೂರಿಕೊಂಡರು.
23btl-DC Visit (Revised photo)ಮಾತಿನ ಚಕಮಕಿ:
ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ರೈತರ ಸಭೆಯಲ್ಲಿ ರೈತ ಸಂಘ ಸದಸ್ಯ ಶರತ್ ಕುಮಾರ್ ಮತ್ತು ಸಂತ್ರಸ್ತ ರೈತ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಝೀಮ ಬೇಗಂ, ಸಹಾಯಕ ಕಮಿಷನರ್ ಡಾ. ಅಶೋಕ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ಅಧಿಕಾರಿ ದಿವಾಕರ ಮುಗುಳ್ಯ, ಸಜೀಪಮೂಡ ಗ್ರಾಮ ಕರಣಿಕ ತೌಫಿಕ್, ಸಿಬಂದಿಗಳಾದ ಸದಾಶಿವ ಕೈಕಂಬ, ನವೀನ್, ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ, ಸುದೇಶ್ ಮಯ್ಯ, ಇದಿನಬ್ಬ, ಹೋರಾಟ ಸಮಿತಿ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಭಟ್, ಕಿಸಾನ್ ಸಂಘದ ಸದಸ್ಯ ಲಕ್ಷ್ಮೀನಾರಾಯಣ ಭಟ್ ಮತ್ತಿತರರು ಇದ್ದರು.
ತುಂಬೆಯಲ್ಲಿ ಏಳು ಮೀಟರ್ ಎತ್ತರದ ಅಣೆಕಟ್ಟೆ ನಿರ್ಮಾಣಗೊಳ್ಳುತ್ತಿದ್ದರೂ, ಮುಳುಗಡೆ ಪ್ರದೇಶವನ್ನು 8 ಮೀಟರ್‍ಗೆ ಸರ್ವೆ ನಡೆಸಿ ಗುರುತು ಹಾಕುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮನಪಾ ಅಧಿಕಾರಿಗಳಿಗೆ ಸೂಚಿಸಿದರು.
ಎ. 15ರಿಂದ ಸರ್ವೆ ಕಾರ್ಯ ಪುನರಾರಂಭಗೊಂಡು ಎರಡು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಮನಾಪ ಎಂಜಿನಿಯರ್ ಮತ್ತಿತರ ಅಧಿಕಾರಿಗಳು ಭರವಸೆ ನೀಡಿದರು.
ಮುಳುಗಡೆ ಪ್ರದೇಶ ಸರ್ವೆ ನಡೆಸುವ ವೇಳೆ ಸ್ಥಳೀಯ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಇದೇ ವೇಳೆ ಸಂತ್ರಸ್ತರ ಪರವಾಗಿ ನರಿಕೊಂಬು ಗ್ರಾಮಕ್ಕೆ ರಾಜಾ ಬಂಟ್ವಾಳ, ಪಾಣೆಮಂಗಳೂರಿಗೆ ಸುದೇಶ್ ಮಯ್ಯ, ಸಜೀಪಮುನ್ನೂರು ಗ್ರಾಮಕ್ಕೆ ಎಂ. ಸುಬ್ರಹ್ಮಣ್ಯ ಭಟ್, ಬಿ. ಮೂಡ ಗ್ರಾಮಕ್ಕೆ ವಾಸುದೇವ ರಾವ್, ಕಳ್ಳಿಗೆ ಗ್ರಾಮಕ್ಕೆ ಮಧುಸೂದನ ಶೆಣೈ ಇವರನ್ನು ಪ್ರತಿನಿಧಿಯಾಗಿ ಶಿಫಾರಸು ಮಾಡಲಾಯಿತು.
ಸಭೆಗೆ ತಡವಾಗಿ ಬಂದ ಮನಾಪ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಸಂತ್ರಸ್ತರ ಸಭೆ ಮುಗಿದ ಬಳಿಕ ಮನಾಪ ಮೇಯರ್ ಹರಿನಾಥ್ ನೇತೃತ್ವದ ಮನಾಪ ಸದಸ್ಯರು ಭೇಟಿ ನೀಡಿದರು.

By Suddi9

Leave a Reply

Your email address will not be published. Required fields are marked *